Karnataka Bandh: ವರ್ಷದ ಕೊನೆಯ ದಿನ ಕರ್ನಾಟಕ ಬಂದ್, ಕನ್ನಡ ಪರ ಸಂಘಟನೆಗಳ ಘೋಷಣೆ

| Updated By: ಆಯೇಷಾ ಬಾನು

Updated on: Dec 22, 2021 | 1:08 PM

ಕರ್ನಾಟಕ ಬಂದ್​: ಎಂಇಎಸ್​ ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳಿಂದ ಡಿ.31ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ​ ಮಾಡಿದ್ದಾರೆ.

Karnataka Bandh: ವರ್ಷದ ಕೊನೆಯ ದಿನ ಕರ್ನಾಟಕ ಬಂದ್, ಕನ್ನಡ ಪರ ಸಂಘಟನೆಗಳ ಘೋಷಣೆ
ವಾಟಾಳ್ ನಾಗರಾಜ್
Follow us on

ಬೆಂಗಳೂರು: ಎಂಇಎಸ್ ದಬ್ಬಾಳಿಕೆ, ದೌರ್ಜನ್ಯ ಹಿನ್ನೆಲೆಯಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ಗೆ ನಿರ್ಧಾರ ಮಾಡಿವೆ. ಎಂಇಎಸ್ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆದಿದ್ದು ಸಭೆಯಲ್ಲಿ ಕರ್ನಾಟಕ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಎಂಇಎಸ್​ ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳಿಂದ ಡಿ.31ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಮಾಡಲಾಗುತ್ತೆ. ಬೆಂಗಳೂರು ಟೌನ್ ಹಾಲ್​ನಿಂದ ಕನ್ನಡಿಗರ ಶಕ್ತಿ ಪ್ರದರ್ಶನಗೊಳ್ಳಲಿದೆ ಎಂದು ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ​ ಮಾಡಿದ್ದಾರೆ. ಇಲ್ಲಿ ಯಾವುದೇ ನೈತಿಕ ಬೆಂಬಲ ಅನ್ನೋದು ಬೇಡ. ಎಲ್ಲರೂ ಒಟ್ಟಾಗಿ ಕರ್ನಾಟಕ ಬಂದ್‌ಗೆ ಬೆಂಬಲಿಸಬೇಕು. ಇಡೀ ರಾಜ್ಯವೇ ಒಂದಾಗಬೇಕು. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರ, ಪೊಲೀಸರು ಇದ್ದಾರೆಯೇ? 70 ವರ್ಷದಿಂದ ಎಂಇಎಸ್​ನವರಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಕನ್ನಡ ಉಳಿದಿದ್ರೆ ಕನ್ನಡ ಪರ ಹೋರಾಟಗಾರರಿಂದ ಮಾತ್ರ. ಉದ್ಧವ್ ಠಾಕ್ರೆ ಸರ್ಕಾರವನ್ನು ರಾಷ್ಟ್ರಪತಿ ವಜಾ ಮಾಡಬೇಕು. ಉದ್ಧವ್ ಠಾಕ್ರೆ ದಬ್ಬಾಳಿಕೆ ನಮ್ಮ ರಾಜ್ಯದಲ್ಲಿ ನಡೆಯಲ್ಲ. ರಾಜ್ಯದಲ್ಲಿ ಎಂಇಎಸ್​ ನಿಷೇಧ ಮಾಡಲೇಬೇಕು. ಬೆಳಗಾವಿಯ ರಾಜಕಾರಣಿಗಳೇ ಇವರ ಏಜೆಂಟ್. ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟರೆ ಕನ್ನಡಿಗರಿಗೆ ಬೆಂಕಿ ಇಟ್ಟ ಹಾಗೆ ಎಂದು ಬೆಂಗಳೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.

ಡಿ.29ರಂದು ಎಂಇಎಸ್ ನಿಷೇಧ ಮಾಡಿದ್ರೆ ಬಂದ್ ವಾಪಸ್​
ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಮಾಡಲೇಬೇಕು. ನಿಷೇಧ ಮಾಡದೆ ಬೇರ ಮಾರ್ಗವೇ ಇಲ್ಲ. ಸಿಎಂ ಬೊಮ್ಮಾಯಿ ಕೂಡಲೇ ತೀರ್ಮಾನ ಮಾಡಬೇಕು. MES ನಿಷೇಧ ಮಾಡುವವರೆಗೆ ಹೋರಾಟ ನಿರಂತರ ಎಂದು ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದ್ದಾರೆ. ಜೊತೆಗೆ ಡಿ.29ರವರಗೆ ಸರ್ಕಾರಕ್ಕೆ ಗಡವು ನೀಡಲಾಗಿದೆ. ಡಿ.29ರಂದು ಎಂಇಎಸ್ ನಿಷೇಧ ಮಾಡಿದ್ರೆ ಬಂದ್ ವಾಪಸ್ ತೆಗೆದುಕೊಳ್ಳುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಇನ್ನು ಕರ್ನಾಟಕ ಬಂದ್‌ನಿಂದ ಹೊಸ ವರ್ಷಾಚರಣೆಗೆ ತೊಂದರೆಯಿಲ್ಲ. ಕರ್ನಾಟಕ ಬಂದ್ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ. ಸಂಜೆ 6 ಗಂಟೆಯ ನಂತರ ಏನು ಬೇಕಾದರೂ ಮಾಡಿಕೊಳ್ಳಲಿ. ಹೊಸ ವರ್ಷಾಚರಣೆ ಸಂಭ್ರಮಕ್ಕೆ ನಾವು ತೊಂದರೆ ಕೊಡಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

ವೇದಿಕೆಯಲ್ಲೇ ಬಂದ್​ಗೆ ಅಪಸ್ವರ, ವಾಟಾಳ್​ ಕೆಂಡಾಮಂಡಲ
ಕರ್ನಾಟಕ ಬಂದ್​ ಷೋಷಣೆ ಸಂಬಂಧ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ವಂದೇ ಮಾತರಂ ವೇದಿಕೆಯ ಅಧ್ಯಕ್ಷಶಿವಕುಮಾರ್ ನಾಯಕ್ ಬಂದ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಬಂದ್‌ ಬೇಡ ಎಂದು ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಹಾಗೂ ಶಿವಕುಮಾರ್ ನಾಯಕ್​ ಹೇಳಿಕೆಯ ವೇಳೆ ಗದ್ದಲ, ಗಲಾಟೆ ಉಂಟಾಗಿದ್ದು ಶಿವಕುಮಾರ್ ನಾಯಕ್​ ವಿರುದ್ಧ ಸಂಘಟನೆಗಳು ತಿರುಗಿಬಿದ್ವು.ಸದ್ಯ ಸಂಘಟನೆ ಮುಖಂಡರು ಸುದ್ದಿಗೋಷ್ಠಿಯಿಂದ ಶಿವಕುಮಾರ್ ನಾಯಕ್​ರನ್ನು ಹೊರಕಳಿಸಿದ್ರು. ಈ ವೇಳೆ ಶಿವಕುಮಾರ್‌ ನಾಯಕ್ ಮೇಲೆ ಕನ್ನಡ ಪರ ಹೋರಾಟಗಾರರು ಹಲ್ಲೆ ನಡೆಸಿದ್ದಾರೆ. ಶಿವಕುಮಾರ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಕುಮಾರ್ ನಾಯಕ್ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಕೆಲವರು ಪ್ರಚಾರದ ಹುಚ್ಚಿನಿಂದ ಈ ರೀತಿ ಮಾಡುತ್ತಾರೆ. ಶಿವಕುಮಾರ್ ನಾಯಕ್‌ನನ್ನು ಹೋರಾಟಗಳಿಗೆ ಸೇರಿಸಿಕೊಳ್ಳಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕನ್ನಡ ಪರ ಹಕ್ಕೊತ್ತಾಯಕ್ಕೆ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮಾಹಿತಿ

Published On - 12:35 pm, Wed, 22 December 21