ಕನ್ನಡ ಪರ ಹಕ್ಕೊತ್ತಾಯಕ್ಕೆ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮಾಹಿತಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಟಿಎಸ್ ನಾಗಾಭರಣ ನೇತೃತ್ವದ ನಿಯೋಗವು ಕನ್ನಡ ಪರ ಹಕ್ಕೊತ್ತಾಯಕ್ಕೆ ಕೇಂದ್ರ ಸಚಿವರನ್ನು ಭೇಟಿಯಾಗಿತ್ತು. ಅದರ ಕುರಿತು ನಾಗಾಭರಣ ಮಾಹಿತಿ ನೀಡಿದ್ದಾರೆ.

ಕನ್ನಡ ಪರ ಹಕ್ಕೊತ್ತಾಯಕ್ಕೆ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮಾಹಿತಿ
Follow us
TV9 Web
| Updated By: shivaprasad.hs

Updated on:Dec 22, 2021 | 12:27 PM

ದೆಹಲಿ: ಭಾಷೆ, ಉದ್ಯೋಗ, ಆಡಳಿತಾತ್ಮಕ ವ್ಯವಸ್ಥೆ ಬದಲಾವಣೆ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್, ಅನುರಾಗ್ ಸಿಂಗ್ ಠಾಕೂರ್, ಕಿಶನ್​ ರೆಡ್ಡಿ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಈ ವೇಳೆ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಸಂಸದರ ಜತೆ ಚರ್ಚೆ ಮಾಡಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ. ಚರ್ಚೆಯ ವೇಳೆ ಬ್ಯಾಂಕಿಂಗ್ ಎ, ಬಿ ಹುದ್ದೆಗಳಿಗೆ ಕನ್ನಡದಲ್ಲೇ ಪರೀಕ್ಷೆ ನಡೆಸಲು ಮನವಿ ಮಾಡಲಾಗಿದೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಂಸತ್​ನಲ್ಲಿ ಈ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಾಗಾಭರಣ ನುಡಿದಿದ್ದಾರೆ.

ಶಿಕ್ಷಣದಲ್ಲಿರುವ ಭಾಷಾ ಸಮಸ್ಯೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಬಳಸುವುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ, ಬ್ಯಾಂಕಿಂಗ್‌ನ ಎ ಮತ್ತು ಬಿ ಹುದ್ದೆಗಳಲ್ಲಿ ಕನ್ನಡದಲ್ಲೆ ಪರೀಕ್ಷೆ ನಡೆಸಲು ಮನವಿ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಸಂಸದರ ಮುಂದೆ ಇಡಲಾಗಿದೆ ಎಂದು ನಾಗಾಭರಣ ತಿಳಿಸಿದ್ದಾರೆ.

ಮಂಗಳವಾರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದ ನಿಯೋಗ: ಮಂಗಳವಾರ (ಡಿಸೆಂಬರ್ 21)ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ನೇತೃತ್ವದ ನಿಯೋಗ ದೆಹಲಿಯಲ್ಲಿ ಕೇಂದ್ರದ ಆಡಳಿತ ಸುಧಾರಣಾ ಇಲಾಖೆಯ ಸಚಿವರಾದ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿತ್ತು. ಆದಾಯ ತೆರಿಗೆ, ಕೇಂದ್ರ ಅಬಕಾರಿ, ಜಿಎಸ್‌ಟಿ ಸೇವೆ, ಆರೋಗ್ಯ ಇಲಾಖೆ, ಇಎಸ್‌ಐ, ರೈಲ್ವೆಗಳಂತಹ ಇಲಾಖೆಗಳಿಗೆ ಆಯ್ಕೆ ಮಾಡುವ ಸಿಬ್ಬಂದಿಗಳಿಗೆ ರಾಜ್ಯ ಭಾಷೆಯಲ್ಲಿ ಪರಿಣಿತಿ ಹೊಂದಿರುವುದನ್ನು ಕಡ್ಡಾಯಗೊಳಿಸಬೇಕು. ನೇಮಕಾತಿಗೆ ಮುನ್ನವೇ ಪ್ರಾದೇಶಿಕ ಭಾಷೆಯ ಪರಿಣತಿಯನ್ನು ಪರೀಕ್ಷಿಸುವ ವ್ಯವಸ್ಥೆ ಮಾಡಬೇಕು. ಯುಪಿಎಸ್​​ಸಿ ಸೇರಿದಂತೆ ಇತರ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು ಎಂದು ಮನವಿ ಮಾಡಲಾಗಿತ್ತು. ಪ್ರತಿ ಜಿಲ್ಲೆಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆಯ ಒಂದು ಕೇಂದ್ರ ಹಾಗೂ ಮಹಾನಗರಗಳ ವ್ಯಾಪ್ತಿಯಲ್ಲಿ 4ರಿಂದ 8 ಕೇಂದ್ರಗಳನ್ನು ತೆರೆಯುವಂತೆ ಕೂಡ ಮನವಿ ಮಾಡಲಾಗಿತ್ತು.

Kannada Development Authority President TS Nagabharana delegation

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಿಂದ ಕೇಂದ್ರ ಸಚಿವರ ಭೇಟಿ

ಪ್ರಾಧಿಕಾರದ ಮನವಿ ಪತ್ರವನ್ನು ಸ್ವೀಕರಿಸಿದ ನಂತರ ಮಾತನಾಡಿದ್ದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ರಾಷ್ಟ್ರೀಯ ಸಿಬ್ಬಂದಿ ಆಯ್ಕೆ ಆಯೋಗದ (Staff Selection Commission Of India) ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ಇದೆ. ಇದು ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗುವಂತೆ ಕಾರ್ಯ ನಿರ್ವಹಿಸುವಂತೆ ಪ್ರಕ್ರಿಯೆಗೊಳಿಸಲಾಗುತ್ತಿದೆ. ಬ್ಯಾಂಕಿಂಗ್ ಪರೀಕ್ಷೆಗಳು ಹೆಣ್ಣು ಮಕ್ಕಳಿಗೆ ಅನುಕೂಲಕರವಾಗುವಂತೆ ಈಗಾಗಲೇ ಮಾಡಲಾಗಿದೆ. ಇದರ ಹೆಚ್ಚಿನ ಅವಕಾಶಗಳನ್ನು ಕರ್ನಾಟಕದವರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು. ಜತೆಗೆ ನಾಗಾಭರಣ ನೇತೃತ್ವದ ನಿಯೋಗವು ನೀಡಿರುವ ಮನವಿ ಪತ್ರಗಳಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಯೋಚಿಸಿ ಯೋಜನೆ ರೂಪಿಸಲಿದೆ ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ:

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಿಂದ ಕೇಂದ್ರ ಸಚಿವರ ಭೇಟಿ; ಕನ್ನಡಿಗರ ಪರ ಹಕ್ಕೊತ್ತಾಯ

ಕನ್ನಡಿಗರ ಕೈ ತಪ್ಪುತ್ತಿವೆ ಬ್ಯಾಂಕಿಂಗ್ ಉದ್ಯೋಗಗಳು: ಟಿ.ಎಸ್. ನಾಗಾಭರಣ ಕಳವಳ

Published On - 12:21 pm, Wed, 22 December 21