ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಿಂದ ಕೇಂದ್ರ ಸಚಿವರ ಭೇಟಿ; ಕನ್ನಡಿಗರ ಪರ ಹಕ್ಕೊತ್ತಾಯ
ಆದಾಯ ತೆರಿಗೆ, ಕೇಂದ್ರ ಅಬಕಾರಿ, ಜಿಎಸ್‌ಟಿ ಸೇವೆ, ಆರೋಗ್ಯ ಇಲಾಖೆ, ಇಎಸ್‌ಐ, ರೈಲ್ವೆಗಳಂತಹ ಇಲಾಖೆಗಳಿಗೆ ಆಯ್ಕೆ ಮಾಡುವ ಸಿಬ್ಬಂದಿಗಳಿಗೆ ರಾಜ್ಯ ಭಾಷೆಯಲ್ಲಿ ಪರಿಣಿತಿ ಹೊಂದಿರುವುದನ್ನು ಕಡ್ಡಾಯಗೊಳಿಸಬೇಕು. UPSC ಸೇರಿದಂತೆ ಇತರ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಮನವಿ ಮಾಡಲಾಯಿತು.
ನವದೆಹಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ನಿಯೋಗ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದೆ. ಆದಾಯ ತೆರಿಗೆ, ಕೇಂದ್ರ ಅಬಕಾರಿ, ಜಿಎಸ್‌ಟಿ ಸೇವೆ, ಆರೋಗ್ಯ ಇಲಾಖೆ, ಇಎಸ್‌ಐ, ರೈಲ್ವೆಗಳಂತಹ ಇಲಾಖೆಗಳಿಗೆ ಆಯ್ಕೆ ಮಾಡುವ ಸಿಬ್ಬಂದಿಗಳಿಗೆ ರಾಜ್ಯ ಭಾಷೆಯಲ್ಲಿ ಪರಿಣಿತಿ ಹೊಂದಿರುವುದನ್ನು ಕಡ್ಡಾಯಗೊಳಿಸಬೇಕು. ನೇಮಕಾತಿಗೆ ಮುನ್ನವೇ ಪ್ರಾದೇಶಿಕ ಭಾಷೆಯ ಪರಿಣತಿಯನ್ನು ಪರೀಕ್ಷಿಸುವ ವ್ಯವಸ್ಥೆ ಮಾಡಬೇಕು. UPSC ಸೇರಿದಂತೆ ಇತರ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಮನವಿ ಮಾಡಲಾಯಿತು.
ಪ್ರತಿ ಜಿಲ್ಲೆಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆಯ ಒಂದು ಕೇಂದ್ರ ಹಾಗೂ ಮಹಾನಗರಗಳ ವ್ಯಾಪ್ತಿಯಲ್ಲಿ 4ರಿಂದ 8 ಕೇಂದ್ರಗಳನ್ನು ತೆರೆಯುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರು ಕೇಂದ್ರದ ಆಡಳಿತ ಸುಧಾರಣಾ ಇಲಾಖೆಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರಲ್ಲಿ ಮನವಿ ಮಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿರುವ ನಿಯೋಗ ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು, ಪರಮಾಣು ಇಂಧನ ಇಲಾಖೆ ಹಾಗೂ ಬಾಹ್ಯಾಕಾಶ ಇಲಾಖೆಯ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಪರವಾದ ಕೆಲವು ಹಕ್ಕೊತ್ತಾಯಗಳನ್ನು ಮಾಡಿತು.
ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ (ನಾನ್ ಗೆಜೆಟೆಡ್ ಹುದ್ದೆಗಳು) ನೇಮಕಾತಿಗಾಗಿ ನಡೆಯವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು (National Recruitment Agency) ಸ್ಥಾಪಿಸಲಾಗುವುದು ಎಂದು ಈ ಸಾಲಿನ (2020-21) ಬಜೆಟ್‌ನಲ್ಲಿ ಪ್ರಕಟಸಲಾಗಿದೆ. ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ನಡೆಸುವ ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಜೊತೆಗೆ ಸಂವಿಧಾನದ ಅನುಸೂಚಿ ೮ರಲ್ಲಿರುವ ಎಲ್ಲ 22 ಭಾಷೆಗಳಲ್ಲೂ ನಡೆಸಬೇಕು ಹಾಗೂ ಆಯಾಯ ರಾಜ್ಯ ಭಾಷೆಯನ್ನು 1ರಿಂದ 10ನೇ ತರಗತಿಯವರೆಗೆ ಒಂದು ಭಾಷೆಯಾಗಿ ವ್ಯಾಸಂಗ ಮಾಡಿರುವವರು ಮಾತ್ರ ಆಯಾಯ ರಾಜ್ಯದಲ್ಲಿ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮವನ್ನು ರೂಪಿಸಬೇಕು ಎಂದು ಹಕ್ಕೋತ್ತಾಯ ಮಂಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ಪ್ರತಿ ಜಿಲ್ಲೆಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆಯ ಒಂದು ಕೇಂದ್ರ ಹಾಗೂ ಮಹಾನಗರಗಳ ವ್ಯಾಪ್ತಿಯಲ್ಲಿ 4ರಿಂದ 8 ಕೇಂದ್ರಗಳನ್ನು ತೆರೆಯುವಂತೆ ಮನವಿ ಮಾಡಿತು.
ರಾಷ್ಟ್ರದ ಐಕ್ಯತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಒಂದು ಹಂತದವರೆಗೆ ಅದು ರಾಜ್ಯ, ಕೇಂದ್ರ ಸರ್ಕಾರದ್ದಿರಲಿ, ಖಾಸಗೀ ವಲಯವಿರಲಿ ಶೇ. 75ರಷ್ಟು ಹುದ್ದೆಗಳು ಸ್ಥಳೀಯರಿಗೆ ಅಂದರೆ ಆಯಾ ರಾಜ್ಯದವರಿಗೇ ಮೀಸಲಿರುವಂತೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ”ಸ್ಥಳೀಯರಿಗೆ ಉದ್ಯೋಗ ರಾಷ್ಟ್ರೀಯ ನೀತಿ”ಯನ್ನು ರೂಪಿಸಿ ಅದನ್ನು ಸಂಸತ್‌ನಲ್ಲಿ ಮಂಡಿಸಿ ಕಾನೂನು ಮಾಡಬೇಕು. ಕೇಂದ್ರ ಸರ್ಕಾರವು ಸ್ಥಳೀಯ ಜನರೊಡನೆ ವ್ಯವಹರಿಸಬೇಕಾದ ಆದಾಯ ತೆರಿಗೆ, ಕೇಂದ್ರ ಅಬಕಾರಿ, ಜಿಎಸ್‌ಟಿ ಸೇವೆ, ಆರೋಗ್ಯ ಇಲಾಖೆ, ಇಎಸ್‌ಐ, ರೈಲ್ವೆಗಳಂತಹ ಇಲಾಖೆಗಳಿಗೆ ಆಯ್ಕೆ ಮಾಡುವ ಸಿಬ್ಬಂದಿಗಳಿಗೆ ರಾಜ್ಯಭಾಷೆಯಲ್ಲಿ ಪರಿಣಿತಿ ಹೊಂದಿರುವುದನ್ನು ಕಡ್ಡಾಯಗೊಳಿಸಬೇಕು ಮತ್ತು ನೇಮಕಾತಿಗೆ ಮುನ್ನವೇ ಪ್ರಾದೇಶಿಕ ಭಾಷೆಯ ಪರಿಣತಿಯನ್ನು ಪರೀಕ್ಷಿಸುವ ವ್ಯವಸ್ಥೆ ಇರಬೇಕು ಎಂದು ನಿಯೋಗ ತಮ್ಮ ಮನವಿಯಲ್ಲಿ ತಿಳಿಸಿತು.
ಆಡಳಿತದಲ್ಲಿ ಜನರ ಸಹಭಾಗಿತ್ವದ ಹಿತದೃಷ್ಟಿಯಿಂದ ಸಂವಿಧಾನದ ೮ನೇ ಅನುಚ್ಛೇದದಡಿ ಬರುವ 22 ಭಾಷೆಗಳಲ್ಲಿಯೂ ಕೇಂದ್ರ ಕಾಯ್ದೆ-ಕಾನೂನುಗಳು, ನೀತಿ ನಿರೂಪಣೆಗಳು ಬರುವಂತಾಗಬೇಕು. ಇದಕ್ಕೆ ಪೂರಕವಾಗಿ ಸಂವಿಧಾನದ 343-351ರವರೆಗಿನ ವಿಧಿಗಳಿಗೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ ಹಾಗೂ 2021ರ ಬಜೆಟ್ ಘೋಷಣೆಯಾದ “National Language Translation Mission” ಮೂಲಕ ಇದನ್ನು ಸಾಕಾರಗೊಳಿಸಬಹುದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ತಿಳಿಸಿದರು.
ಪ್ರಾಧಿಕಾರದ ಮನವಿ ಪತ್ರವನ್ನು ಸ್ವೀಕರಿಸಿದ ನಂತರ ಮಾತನಾಡಿದ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ರಾಷ್ಟ್ರೀಯ ಸಿಬ್ಬಂದಿ ಆಯ್ಕೆ ಆಯೋಗದ (Staff Selection Commission Of India) ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ಇದೆ. ಇದು ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗುವಂತೆ ಕಾರ್ಯ ನಿರ್ವಹಿಸುವಂತೆ ಪ್ರಕ್ರಿಯೆಗೊಳಿಸಲಾಗುತ್ತಿದೆ. ಬ್ಯಾಂಕಿಂಗ್ ಪರೀಕ್ಷೆಗಳು ಹೆಣ್ಣು ಮಕ್ಕಳಿಗೆ ಅನುಕೂಲಕರವಾಗುವಂತೆ ಈಗಾಗಲೇ ಮಾಡಲಾಗಿದೆ. ಇದರ ಹೆಚ್ಚಿನ ಅವಕಾಶಗಳನ್ನು ಕರ್ನಾಟಕದವರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ನೀವು ನೀಡಿರುವ ಮನವಿ ಪತ್ರಗಳಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಯೋಚಿಸಿ ಯೋಜನೆ ರೂಪಿಸಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಕನ್ನಡ, ಮರಾಠಿ ತಿಳಿದಿರುವ ಹಿರಿಯರ ಸಮಿತಿ ರಚನೆಗೆ ಚಿಂತನೆ; ಕಸಾಪ ಅಧ್ಯಕ್ಷ ಮಹೇಶ್ ಜೋಶಿ
ಕನ್ನಡ ಕಟುಕರ ಕೈಯಲ್ಲಿ ಸಿಲುಕಿಕೊಂಡಿದೆ; ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್