ಡಬ್ಬಿಂಗ್ ಚಿತ್ರದ ಕನ್ನಡ ವರ್ಷನ್ಗೆ ಹೆಚ್ಚು ಥಿಯೇಟರ್ ಸಿಗಲ್ಲ ಯಾಕೆ? ಪ್ರಾಕ್ಟಿಕಲ್ ಕಾರಣ ತಿಳಿಸಿದ ‘83’ ವಿತರಕ ಜಾಕ್ ಮಂಜು
‘ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳ ಬಿಡುಗಡೆ ಎಂಬುದು ಹೊಸ ಟ್ರೆಂಡ್. ಯಾವುದಾದರೊಂದು ಚಿತ್ರ ಕನ್ನಡ ವರ್ಷನ್ನಲ್ಲಿ ಬಂದು ದೊಡ್ಡ ಹಿಟ್ ಆದಾಗ ಸಂಪೂರ್ಣ ಚಿತ್ರಣ ಬದಲಾಗುತ್ತದೆ’ ಎಂಬುದು ವಿತರಕ/ನಿರ್ಮಾಪಕ ಜಾಕ್ ಮಂಜು ಅವರ ಅಭಿಪ್ರಾಯ.
ಬಹುತೇಕ ಎಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ತೆರೆಕಾಣುತ್ತಿವೆ. ಇತ್ತೀಚೆಗೆ ‘ಪುಷ್ಪ’ ಚಿತ್ರ ರಿಲೀಸ್ ಆಯಿತು. ಆದರೆ ಆ ಚಿತ್ರದ ಕನ್ನಡ ವರ್ಷನ್ಗಿಂತಲೂ ತೆಲುಗು ವರ್ಷನ್ಗೆ ಹೆಚ್ಚು ಥಿಯೇಟರ್ಗಳು ಸಿಕ್ಕವು. ಕನ್ನಡದಲ್ಲಿ ‘ಪುಷ್ಪ’ ನೋಡಬೇಕು ಎಂದುಕೊಂಡಿದ್ದ ಪ್ರೇಕ್ಷಕರಿಗೆ ಇದು ನಿರಾಸೆ ಉಂಟು ಮಾಡಿತ್ತು. ಡಿ.24ರಂದು ರಣವೀರ್ ಸಿಂಗ್ (Ranveer Singh) ನಟನೆಯ ಬಹುನಿರೀಕ್ಷಿತ ‘83’ ಸಿನಿಮಾ (83 Movie) ಸಹ ಕನ್ನಡಕ್ಕೆ ಡಬ್ ಆಗಿ ತೆರೆಕಾಣಿತ್ತಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಕಿಚ್ಚ ಸುದೀಪ್ (Kichcha Sudeep) ಅವರು ಪ್ರಸ್ತುತಪಡಿಸುತ್ತಿದ್ದಾರೆ. ಶಾಲಿನ ಆರ್ಟ್ ಮೂಲಕ ಜಾಕ್ ಮಂಜು (Jack Manju) ಅವರು ವಿತರಣೆ ಮಾಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಗಳ (Dubbing Movie) ಕನ್ನಡ ವರ್ಷನ್ ಹೆಚ್ಚು ಚಿತ್ರಮಂದಿರಗಳಲ್ಲಿ ಯಾಕೆ ರಿಲೀಸ್ ಆಗುವುದಿಲ್ಲ ಎಂಬುದಕ್ಕೆ ಜಾಕ್ ಮಂಜು ಅವರು ಕೆಲವು ಪ್ರಾಕ್ಟಿಕಲ್ ಕಾರಣಗಳನ್ನು ನೀಡಿದ್ದಾರೆ.
‘ಕರ್ನಾಟಕದಲ್ಲಿ ಅಂದಾಜು 50 ಕಡೆಗಳಲ್ಲಿ ‘83’ ಚಿತ್ರದ ಕನ್ನಡ ವರ್ಷನ್ ಬಿಡುಗಡೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರಗಳ ಒಂದು ಚಿತ್ರಮಂದಿರದಲ್ಲಿ ಹಿಂದಿ ಇದ್ದರೆ ಇನ್ನೊಂದು ಚಿತ್ರಮಂದಿರದಲ್ಲಿ ಕನ್ನಡ ವರ್ಷನ್ ಇರಲಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಜಾಕ್ ಮಂಜು ಹೇಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ಬೇರೆಯೇ ಇದೆ. ‘83’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಈಗಾಗಲೇ ಓಪನ್ ಆಗಿದೆ. ಸದ್ಯಕ್ಕೆ ಹಿಂದಿ ವರ್ಷನ್ಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಮಂಜು ವಿವರಿಸಿದ್ದಾರೆ.
‘ಬೆಂಗಳೂರು ನಗರದಲ್ಲಿ ಶೇ.85ರಿಂದ ಶೇ.90ರಷ್ಟು ಹಿಂದಿ ವರ್ಷನ್ ಇರುತ್ತದೆ. ಡಬ್ಬಿಂಗ್ ಸಿನಿಮಾಗಳ ಬಿಡುಗಡೆ ಎಂಬುದು ನಮ್ಮ ರಾಜ್ಯದಲ್ಲಿ ಹೊಸ ಪದ್ಧತಿ. ಎಲ್ಲ ಚಿತ್ರಗಳು ಏಕಾಏಕಿ ಕನ್ನಡದ ವರ್ಷನ್ನಲ್ಲೇ ಬಂದುಬಿಡುತ್ತವೆ ಎಂಬುದು ಸುಳ್ಳು. ಜನರು ಕೂಡ ಕನ್ನಡ ವರ್ಷನ್ ಬೇಕು ಅಂತ ಕೇಳಬೇಕು. ಚಿತ್ರಮಂದಿರದವರು ಕೂಡ ಕನ್ನಡ ವರ್ಷನ್ ಕೊಡಿ ಎನ್ನಬೇಕು. ವಿತರಕರಾಗಿ ನಾವು ಕನ್ನಡ ವರ್ಷನ್ ಬಿಡುಗಡೆ ಮಾಡಲು ಸಿದ್ಧರಿದ್ದೇವೆ’ ಎಂದಿದ್ದಾರೆ ಜಾಕ್ ಮಂಜು.
‘83 ಸಿನಿಮಾ ಮೂಲ ಹಿಂದಿ ಭಾಷೆಯ ಚಿತ್ರವಾದ್ದರಿಂದ ಬಹುತೇಕರು ಹಿಂದಿ ವರ್ಷನ್ ನೋಡಲು ಬಯಸುತ್ತಾರೆ. ಹಿಂದಿ ತಿಳಿಯದೇ ಇರುವವರು ಕನ್ನಡ ವರ್ಷನ್ ನೋಡಲು ಬರುತ್ತಾರೆ. ಹಾಗಾಗಿ ಎರಡೂ ಅವತರಣಿಕೆಗೆ ಥಿಯೇಟರ್ ನೀಡಲು ಪ್ರಯತ್ನಿಸಿದ್ದೇನೆ. ಚಿತ್ರಮಂದಿರದವರು ಇನ್ನೂ ಧೈರ್ಯ ತೋರುತ್ತಿಲ್ಲ. ಕನ್ನಡ ವರ್ಷನ್ಗೆ ಜನರು ಬರುತ್ತಾರೋ ಇಲ್ಲವೋ ಎಂಬ ಭಯ ಚಿತ್ರಮಂದಿರದವರಿಗೆ ಇದೆ. ಯಾವುದಾದರೊಂದು ಚಿತ್ರ ಕನ್ನಡ ವರ್ಷನ್ನಲ್ಲಿ ಬಂದು ದೊಡ್ಡ ಹಿಟ್ ಆದಾಗ ಸಂಪೂರ್ಣ ಚಿತ್ರಣ ಬದಲಾಗುತ್ತದೆ’ ಎಂದು ಜಾಕ್ ಮಂಜು ಹೇಳಿದ್ದಾರೆ.
‘ಈ ಹಿಂದೆ ‘ದಬಂಗ್ 3’ ಮತ್ತು ‘ಸೈರಾ ನರಸಿಂಹ ರೆಡ್ಡಿ’ ಚಿತ್ರಗಳು ಹೆಚ್ಚು ಕನ್ನಡ ವರ್ಷನ್ನಲ್ಲಿ ಬಿಡುಗಡೆ ಆಗಿದ್ದವು. ಅದರಲ್ಲಿ ನಮ್ಮ ಚಿತ್ರರಂಗದ ಸ್ಟಾರ್ ಕಲಾವಿದರು ನಟಿಸಿದ್ದರು. ಹಾಗಾಗಿ ಹೆಚ್ಚು ಚಿತ್ರಮಂದಿರ ಸಿಕ್ಕಿತ್ತು’ ಎಂದಿದ್ದಾರೆ ಜಾಕ್ ಮಂಜು.
ಇದನ್ನೂ ಓದಿ:
1983ರ ವಿಶ್ವಕಪ್ ಟೀಮ್ ಆಟಗಾರರಿಗೆ ಈಗ ಸಿಕ್ಕಿದೆ ಕೋಟಿ ಕೋಟಿ ಸಂಭಾವನೆ; ಕಪಿಲ್ ದೇವ್ಗೆ 5 ಕೋಟಿ
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್ ಸಿಂಗ್ಗೆ ಕನ್ನಡ ಡೈಲಾಗ್ ಹೇಳಿಕೊಟ್ಟ ಕಿಚ್ಚ ಸುದೀಪ್