ಮೆಟಾ ಉದ್ಯೋಗಿ ಇಂದು ಆಟೋ ಚಾಲಕ?: ವೈರಲ್​​ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ

ಬೆಂಗಳೂರಿನ ಆಟೋದಲ್ಲಿ ಮೆಟಾ ಐಡಿ ಕಾರ್ಡ್ ಪತ್ತೆಯಾದ ವೈರಲ್ ವಿಡಿಯೋ ಚರ್ಚೆಗೆ ಕಾರಣವಾಗಿದೆ. ಮೆಟಾ ಉದ್ಯೋಗಿ ವಜಾ ಆಗಿ ಆಟೋ ಚಾಲಕನಾಗಿದ್ದಾರೆಯೇ ಅಥವಾ ಪ್ರಯಾಣಿಕರು ಮರೆತಿರುವ ಕಾರ್ಡ್ ಇದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಇತ್ತೀಚಿನ ಟೆಕ್ ವಲಯದ ಲೇ ಆಫ್‌ಗಳ ಹಿನ್ನೆಲೆಯಲ್ಲಿ ಈ ಘಟನೆ ಉದ್ಯೋಗ ಅನಿಶ್ಚಿತತೆಯನ್ನು ಪ್ರತಿಬಿಂಬಿಸಿದೆ.

ಮೆಟಾ ಉದ್ಯೋಗಿ ಇಂದು ಆಟೋ ಚಾಲಕ?: ವೈರಲ್​​ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ
ಆಟೋದಲ್ಲಿ ಕಂಡುಬಂದ ಮೆಟಾ ಐಡಿ ಕಾರ್ಡ್​​
Image Credit source: Google

Updated on: Mar 20, 2026 | 11:53 AM

ಬೆಂಗಳೂರು, ಮಾರ್ಚ್​​ 20: ಇತ್ತೀಚಿನ ದಿನಗಳಲ್ಲಿ ಯಾರ ಉದ್ಯೋಗಕ್ಕೂ ಖಾತರಿ ಇಲ್ಲ. ಯಾವುದೇ ಸಂದರ್ಭವೂ ಲೇ ಆಫ್​​ ಆಗಬಹುದೆಂಬ ಸ್ಥಿತಿ ಇದೆ. ಹೀಗಿರುವಾಗ ಬೆಂಗಳೂರಿನ ಆಟೋವೊಂದರ ಮುಂಭಾಗ ತೂಗಿಹಾಕಲಾಗಿರುವ ಮೆಟಾ ಐಡಿ ಕಾರ್ಡ್​​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ಪ್ರಯಾಣದ ವೇಳೆ ಆಟೋದಲ್ಲಿರುವ ಈ ಗುರುತಿನ ಚೀಟಿಯನ್ನು ಗಮನಿಸಿದ ವ್ಯಕ್ತಿಯೋರ್ವರು ಅದರ ದೃಶ್ಯವನ್ನು ಸೆರೆ ಹಿಡಿದು, ಇದು ಟೆಕ್ ಉದ್ಯಮದ ಉದ್ಯೋಗ ಕಡಿತದ ಕಠಿಣ ವಾಸ್ತವತೆಯನ್ನು ತೋರಿಸುತ್ತದೆ ಎಂಬ ಶೀರ್ಷಿಕೆಯ ಜೊತೆ ಪೋಸ್ಟ್​​ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ನಾನಾ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.

ವೈರಲ್​​ ವಿಡಿಯೋದಲ್ಲಿ ಏನಿದೆ?

ಸಿದ್ಧಾಂತ್​​ ಸಿಂಗ್​​ ರಜಪೂತ್​​ ಎಂಬ ವ್ಯಕ್ತಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಯಾಣಿಕರ ಸೀಟಿನಿಂದ ತೆಗೆದ ಈ ವಿಡಿಯೋದಲ್ಲಿ ಆಟೋ ಚಾಲಕ ವಾಹನ ಓಡಿಸುತ್ತಿರುವುದು ಕಾಣುತ್ತದೆ. ಆದರೆ ಗಮನ ಸೆಳೆಯುವುದು, ಆಟೋ ಮೇಲ್ಭಾಗದಲ್ಲಿ ತೂಗುತ್ತಿರುವ ಮೆಟಾ ಕಂಪನಿಯ ಐಡಿ ಕಾರ್ಡ್. ಮೊದಲಿಗೆ ಆ ಐಡಿ ಚಾಲಕದ್ದೇ ಎಂದು ರಜಪೂತ್​​ ಹೇಳಿದ್ದರೂ, ಬಳಿಕ ಆ ಬಗ್ಗೆ ಖಚಿತತೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಮಳೆಯ ನಡುವೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಮಿನಿ ವಾಟರ್ ಫಾಲ್ಸ್’? ಚರ್ಚೆಗೆ ಗ್ರಾಸವಾದ ವೈರಲ್ ವಿಡಿಯೋ

ಈ ವೈರಲ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು, ಈ ಚಾಲಕ ಹಿಂದೆ ಮೆಟಾ ಉದ್ಯೋಗಿಯಾಗಿದ್ದು, ಉದ್ಯೋಗ ಕಳೆದುಕೊಂಡು ಈಗ ಆಟೋ ಓಡಿಸುತ್ತಿರಬಹುದು ಎಂದು ಅಂದಾಜಿಸಿದ್ದಾರೆ. ಇನ್ನೂ ಕೆಲವರು ಆ ಐಡಿ ಕಾರ್ಡ್ ಅನ್ನು ಯಾವುದೋ ಪ್ರಯಾಣಿಕರು ಮರೆತುಹೋದ ಬಳಿಕ ಚಾಲಕ ಅದನ್ನು ಕೇವಲ ತೆಗೆದುಕೊಂಡು ಹಾಕಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು ಇನ್ಫಿನಿಟಿ ಸ್ಟೋನ್ಸ್​​ಗಳ ರೀತಿ ಆಟೋ ಚಾಲಕ ಬ್ಯಾಂಡ್​​ಗಳನ್ನು ಸಂಗ್ರಹಿಸುತ್ತಿರಬಹುದು ಎಂದು ಕಾಮೆಂಟ್​​ ಮಾಡಿದ್ದಾರೆ. ಟೆಕ್ ಉದ್ಯಮದಲ್ಲಿ ಇತ್ತೀಚೆಗೆ ನಡೆದ ದೊಡ್ಡ ಮಟ್ಟದ ಉದ್ಯೋಗ ಕಡಿತಗಳ ಹಿನ್ನೆಲೆಯಲ್ಲಿ, ಈ ಘಟನೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಉದ್ಯೋಗ ಕಳೆದುಕೊಂಡ ನಂತರ ಬದುಕಿಗಾಗಿ ಆತ ಆಟೋ ಚಾಲನೆಗೆ ಬಂದಿರಬಹುದು ಎಂಬ ಚರ್ಚೆಯೇ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರೂ, ಸತ್ಯ ಏನು ಎಂಬ ಬಗ್ಗೆ ಸ್ಪಷ್ಟತೆ ಮಾತ್ರ ಸಿಕ್ಕಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us