AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೇ ಗುಂಡಿ ಮುಚ್ತಿದ್ರೆ ಹೊಸ ಗುಂಡಿ ಬೀಳ್ತಿರುತ್ತೆ, ಬೆಂಗಳೂರು ರಸ್ತೆಗಳು ಹೈವೇಗಳಲ್ಲ: ಅಶ್ವತ್ಥ ನಾರಾಯಣ

ನಾವು ಒಂದು ಹಳೆಯ ಗುಂಡಿ ಮುಚ್ಚುತ್ತಿದ್ದಂತೆ ಮತ್ತೊಂದು ಹೊಸ ಗುಂಡಿ ಬೀಳುತ್ತಿರುತ್ತದೆ. ಮಳೆಯ ನಡುವೆ ಗುಂಡಿಗಳನ್ನು ಮುಚ್ಚುವುದೇ ದೊಡ್ಡ ಸವಾಲಾಗಿದೆ ಎಂದು ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಹಳೇ ಗುಂಡಿ ಮುಚ್ತಿದ್ರೆ ಹೊಸ ಗುಂಡಿ ಬೀಳ್ತಿರುತ್ತೆ, ಬೆಂಗಳೂರು ರಸ್ತೆಗಳು ಹೈವೇಗಳಲ್ಲ: ಅಶ್ವತ್ಥ ನಾರಾಯಣ
ಸಚಿವ ಸಿ.ಎನ್.ಅಶ್ವತ್ಥ ನಾರಾಯಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 03, 2022 | 2:45 PM

Share

ಬೆಂಗಳೂರು: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ನಗರದ ಐಟಿ-ಬಿಟಿ ಉದ್ಯಮಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವು ಒಂದು ಹಳೆಯ ಮುಚ್ಚುತ್ತಿದ್ದಂತೆ ಮತ್ತೊಂದು ಹೊಸ ಗುಂಡಿ ಬೀಳುತ್ತಿರುತ್ತದೆ. ಮಳೆಯ ನಡುವೆ ಗುಂಡಿಗಳನ್ನು ಮುಚ್ಚುವುದೇ ದೊಡ್ಡ ಸವಾಲಾಗಿದೆ ಎಂದರು. ಬೆಂಗಳೂರು ನಗರದ ಸಮಸ್ಯೆ ಬಗೆಹರಿಸುವ ಕೆಲಸ ಆಗುತ್ತಿದೆ. ನಮ್ಮ ನಗರವನ್ನು ನಾವೇ ಖಂಡಿಸುವುದು ಸರಿಯಲ್ಲ. ಕೆಲಸ ಮಾಡುವುದು ಹುಡುಗಾಟಿಕೆ ಅಂದುಕೊಂಡಿದ್ದೀರಾ? ಬೆಂಗಳೂರು ನಗರದ ರಸ್ತೆಗಳೆಲ್ಲ ನ್ಯಾಷನಲ್​ ಹೈವೇಗಳಲ್ಲ. ದಿನಕೊಬ್ಬರು ಯುಜಿಡಿ, ಸಂಪ್​ ರಿಪೇರಿ ಅಂತ ರಸ್ತೆ ಅಗೆಯುತ್ತಾರೆ. ಗುಣಮಟ್ಟದ ಕಾಮಗಾರಿಗೆ ನಾವು ಹೆಚ್ಚು ಒತ್ತು ನೀಡಿದ್ದೇವೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ರಸ್ತೆ ಗುಂಡಿ ಮುಚ್ಚುವ ಕುರಿತು ಸಾಕಷ್ಟು ಚರ್ಚೆಯಾಗಿದ್ದು, ಈಗಾಗಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದು ನಿರಂತರ ನಡೆಯಬೇಕಾದ ಪ್ರಕ್ರಿಯೆ. ನಾವು ಒಂದೊಂದು ಗುಂಡಿಗಳನ್ನು ಮುಚ್ಚಿದಂತೆ ಹೊಸ ಗುಂಡಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ನೀರು, ಸ್ಯಾನಿಟರಿ ಲೈನ್​ಗಳು ಸಹ ರಸ್ತೆಗಳಲ್ಲಿಯೇ ಇವೆ. ಅವುಗಳ ಸೋರಿಕೆಯಿಂದಲೂ ರಸ್ತೆಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ರಸ್ತೆಗಳಿಗೆ ಬಳಸುವ ಬಿಟುಮಿನ್ ಗುಣಮಟ್ಟ ಸರಿಯಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ. ಇದು ನಿರಾಧಾರವಾದುದು ಎಂದರು. ಮಳೆಯಿಂದಾಗಿ ಮರಗಳು ಉರುಳುವುದು, ಬೆಸ್ಕಾಂ ಲೈನ್ ರಿಪೇರಿ, ಮ್ಯಾನ್​ಹೋಲ್ ಕುಸಿಯುವುದು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ವಿವರಿಸಿದರು.

ನಗರದಲ್ಲಿ ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬಿಟುಮಿನ್ ಕ್ವಾಲಿಟಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಕಳಪೆ ಕಂಡು ಬಂದಲ್ಲಿ ಹೊಸದಾಗಿ ಕಾಮಗಾರಿ ಮಾಡಿಸಿರುವ ಉದಾಹರಣೆಗಳೂ ಇವೆ ಆರೋಪ ಮಾಡುವ ಮೊದಲು ಈ ಅಂಶಗಳನ್ನೂ ಗಮನಿಸಬೇಕು ಅಲ್ಲವೇ ಎಂದು ಪ್ರಶ್ನಿಸಿದರು. ಬೆಂಗಳೂರಿನ ಮಹದೇವಪುರ, ಔಟರ್ ರಿಂಗ್ ರೋಡ್, ಕೆ.ಆರ್.ಪುರಂ, ಬೆಳ್ಳಂದೂರು, ವರ್ತೂರು ಸೇರಿದಂತೆ ಅನೇಕ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಳದ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳ ಮುಖ್ಯಸ್ಥರು ಹಾಗೂ ಸಂಘಟನೆಗಳ ಜೊತೆ ಸಚಿವರು ಸಭೆ ನಡೆಸಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಮೀನಾ ನಾಗರಾಜ್, ಔಟರ್ ರಿಂಗ್ ರಸ್ತೆಯ ಕಂಪನಿಗಳ ಮುಖ್ಯಸ್ಥರು, ಬಿಎಂಟಿಸಿ ಹಾಗೂ ಬಿಎಂಆರ್ ಸಿಎಲ್ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಸೇವಾ ವಲಯದ ಮುಖ್ಯಸ್ಥರ (ಸರ್ವಿಸ್ ಸೆಕ್ಟರ್) ಸಭೆಯಗಳನ್ನು ಹಲವು ಬಾರಿ ಮಾಡಿದ್ದೇವೆ. ಪ್ರತಿ ತಿಂಗಳು ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಆರ್ಕಾ ಸಂಸ್ಥೆ, ಐಟಿ-ಬಿಟಿ ಕಂಪನಿಗಳ ಜೊತೆ ಪ್ರಗತಿ ಬಗ್ಗೆ ಚರ್ಚೆ ಮಾಡಿದೆವು. ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆಗುತ್ತಿದೆ. ಇದು ನಮ್ಮ ನಗರ, ಮುಕ್ತವಾಗಿ ಸಮಸ್ಯೆ ಹೇಳಲು ಅವಕಾಶ ನೀಡಿದ್ದೇವೆ ಎಂದರು.

ನ 14ರಂದು ಖುದ್ದು ಸ್ಥಳಕ್ಕೆ ಭೇಟಿ ನೀಡುತ್ತೇನೆ. ಜಂಟಿ ಪರಿಶೀಲನಾ ಕಾರ್ಯ ನಡೆಯಲಿದೆ. ಇಂದು ಹದಿನೈದು ನಿಮಿಷದಲ್ಲೇ ಸಭೆ ಮುಗಿದಿದೆ. ಸಂತೋಷದಿಂದ ಎಲ್ಲರೂ ಸಲಹೆ, ಸಮಸ್ಯೆ ಹೇಳಿ ಹೋಗಿದ್ದಾರೆ. ಟ್ರಾಫಿಕ್, ಕುಡಿಯುವ ನೀರು ಡ್ರೈನೇಜ್, ಮೆಟ್ರೋ ಕುರಿತಂತೆ ಅಹವಾಲು ಬಂದಿವೆ. ಸರ್ಕಾರವು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುತ್ತದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಆಹ್ವಾನವಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಭವಿಷ್ಯ ಇಲ್ಲದ ಪಕ್ಷ. ಅಂಥ ಪಕ್ಷಕ್ಕೆ ಯಾರಾದರೂ ಹೋಗುತ್ತಾರಾ ಎಂದು ಪ್ರಶ್ನಿಸಿದರು. ಶಾಲೆ ಮತ್ತು ಕಾಲೇಜುಗಳಲ್ಲಿ ಧ್ಯಾನಕ್ಕೆ ಅವಕಾಶ ನೀಡುವ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧ್ಯಾನ ಮಾಡುವುದು ವೈಜ್ಞಾನಿಕವಾಗಿ ಒಳ್ಳೆಯದು. ಅದರಿಂದ ಯಾರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

Published On - 2:43 pm, Thu, 3 November 22