ಸಚಿವ ಡಿ.ಸುಧಾಕರ್ ವಿರುದ್ಧ ಎಫ್ಐಆರ್: ಮಹಿಳೆ ಜತೆ ಗಲಾಟೆ, ಏನಿದು ಪ್ರಕರಣ? ಇಲ್ಲಿದೆ ಡಿಟೇಲ್ಸ್
ನನ್ನ ಬಳಿ ಸೂಕ್ತ ದಾಖಲೆಗಳಿವೆ ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ಹತ್ತು ವರ್ಷಗಳ ಹಿಂದೆಯೇ ವ್ಯವಹಾರ ನಡೆದಿದೆ ಎಂದು ಸಚಿವ ಡಿ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರು ಸೆ.12: ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋಪದ ಅಡಿಯಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್ (Minister D Sudhakar) ಮೇಲೆ ಎಫ್ಐಆರ್ (FIR) ದಾಖಲಾದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಡಿ. ಸುಧಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ. ಜಮೀನು ವ್ಯವಹಾರದ ವೇಳೆ ಸಚಿವ ಡಿ.ಸುಧಾಕರ್ ಬ್ರಾಹ್ಮಣರ ಬಗ್ಗೆ ಮಾತಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಮಾತನಾಡಿದ ಡಿ. ಸುಧಾಕರ್ ನನ್ನ ಬಳಿ ಸೂಕ್ತ ದಾಖಲೆಗಳಿವೆ ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ಹತ್ತು ವರ್ಷಗಳ ಹಿಂದೆಯೇ ವ್ಯವಹಾರ ನಡೆದಿದೆ. ಕಾನೂನು ಮೂಲಕ ಹೋರಾಟ ನಡೆಸುವ ಅವಶ್ಯಕತೆ ಇಲ್ಲ. ನನ್ನ ಬಳಿ ಎಲ್ಲಾ ದಾಖಲಿಗಳಿವೆ. ಈ ಹಿಂದೆಯೇ ಸಚಿವನಾಗಿದ್ದ ವೇಳೆಯೂ ಆರೋಪ ಮಾಡಿದ್ದರು ಎಂದರು.
ಏನಿದು ಪ್ರಕರಣ
ಡಿ. ಸುಧಾಕರ್ ಪಾಲುದಾರರಾಗಿರುವ ಸೆವೆನ್ ಹಿಲ್ಸ್ ಡೆವಲಪರ್ಸ್ ಅಂಡ್ ಟ್ರೇಡರ್ಸ್ ರಿಯಲ್ ಎಸ್ಟೆಟ್ ಕಂಪನಿ 2003 ರಲ್ಲಿ ಸುಬ್ಬಮ್ಮ ಎಂಬುವರಿಂದ ಯಲಹಂಕದ ಸರ್ವೆ ನಂಬರ್ 108/1ರ ಜಮೀನನ್ನು ಕೊಂಡುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಜಮೀನಿಗೆ ಇದ್ದ ಬೆಲೆಯನ್ನು ಸುಬ್ಬಮ್ಮ ಅವರಿಗೆ ಕಂಪನಿ ನೀಡುತ್ತೆ. ಮತ್ತು ಕ್ರಯಪತ್ರ ಮಾಡಿಕೊಂಡಿದೆ. ಆದರೆ ಇದೀಗ ಸುಬ್ಬಮ್ಮ ಅವರು ಅಂದು ಮಾರಿದ ಜಮೀನಿಗೆ ಇಂದಿನ ಬೆಲೆಗೆ ಹಣ ನೀಡಿ ಎಂದು ಡಿ. ಸುಧಾಕರ್ ಅವರ ಬಳಿ ಬಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ 11 ಜನರು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಆಪ್ತ ವಲಯ ಟಿವಿ9ಗೆ ತಿಳಿಸಿದೆ.
ಇದನ್ನೂ ಓದಿ: ಭೂ ಕಬಳಿಕೆ, ಜಾತಿನಿಂದನೆ ಆರೋಪ: ಸಚಿವ ಡಿ ಸುಧಾಕರ್ ಸೇರಿದಂತೆ ಮೂವರ ವಿರುದ್ದ FIR
ಈ ಹಿನ್ನೆಲೆಯಲ್ಲಿ ಸುಬ್ಬಮ್ಮ ಮತ್ತು ಡಿ.ಸುಧಾಕರ್ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ನಂತರ ಸುಬ್ಬಮ್ಮ ಅವರು ಸೆ.10 ರಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆವನ್ ಹಿಲ್ಸ್ ಅಂಡ್ ಟ್ರೇಡರ್ಸ್ ಪಾಲುದಾರರಾದ ಸುಧಾಕರ್ ಸೇರಿದಂತೆ ಮೂವರು ಮೋಸದಿಂದ ಜಮೀನು ಕಬಳಿಸಿದ್ದಾರೆ. ಯಲಹಂಕದ ಸರ್ವೆ ನಂಬರ್ 108/1ರ ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಹೀಗಿದ್ದರೂ ಅವರ 40 ಮಂದಿ ಸಹಚರರು ಬಂದು ನನ್ನ ಪುತ್ರಿ ಆಶಾ ಮೇಲೆ ಮಾಡಿದ್ದಾರೆ. ಪ್ರಶ್ನಿಸದಾಗ ಜಾತಿ ನಿಂದನೆ ಮಾಡಲಾಗಿದೆ. ಜೆಸಿಬಿ ಯಂತ್ರದಿಂದ ಕಟ್ಟಡ, ಸೀಟಿನ ಶೆಡ್, ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Tue, 12 September 23