ಸಿದ್ದರಾಮಯ್ಯ ಸಿಎಂ ಆಗಲಿ: ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು, ಟ್ವೀಟ್ ಮಾಡಿ ವ್ಯಂಗ್ಯವಾಡಿದ ಕಾಂಗ್ರೆಸ್

| Updated By: ಆಯೇಷಾ ಬಾನು

Updated on: Aug 17, 2022 | 3:01 PM

ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಶ್ರೀರಾಮುಲು, ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ. ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದರು.

ಸಿದ್ದರಾಮಯ್ಯ ಸಿಎಂ ಆಗಲಿ: ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು, ಟ್ವೀಟ್ ಮಾಡಿ ವ್ಯಂಗ್ಯವಾಡಿದ ಕಾಂಗ್ರೆಸ್
ಸಾರಿಗೆ ಸಚಿವ ಬಿ ಶ್ರೀರಾಮುಲು
Follow us on

ಬೆಂಗಳೂರು: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ(Siddaramaiah) ಸಿಎಂ ಆಗಲಿ ಎಂಬ ಹೇಳಿಕೆಗೆ ಸ್ಪಷ್ಟನೆ ಕೊಡಲು ಹೋಗಿ ಸಚಿವ ಬಿ. ಶ್ರೀರಾಮುಲು(B Sriramulu) ಮತ್ತೆ ಯಡವಟ್ಟು ಮಾಡಿಕೊಂಡಿದ್ದಾರೆ. ನಾನು ಹೇಳಿದ್ದು ಅವರ ಪಕ್ಷದಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿ ಅಂತ, ಆದರೆ ಅವರನ್ನು ಅಲ್ಲಿ ಸಿಎಂ ಆಗೋದಕ್ಕೆ ಬಿಡಲ್ಲ, ಅದಕ್ಕಾಗಿ ನಮ್ಮ ಪಕ್ಷಕ್ಕೆ ಬರಲಿ ಎಂದು ಹೇಳಿದ್ದೇನೆ ಅಷ್ಟೇ ಎಂದು ಹೇಳುವ ಮೂಲಕ ಇದೀಗ ಶ್ರೀರಾಮುಲು ಪೇಚಿಗೆ ಸಿಲುಕಿದ್ದಾರೆ.

ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಶ್ರೀರಾಮುಲು, ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ. ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಲು ಭರದಲ್ಲಿ ಮತ್ತೆ ಪೇಜೆಗೆ ಸಿಲುಕಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಚಿವ ಶ್ರೀರಾಮುಲು ಸ್ಪಷ್ಟನೆ

ಇನ್ನು ಈ ಹೇಳಿಕೆ‌ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಸಚಿವ ಶ್ರೀರಾಮುಲು ಸ್ಪಷ್ಟೀಕರಣ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಭೇಟಿಯಾಗಿದ್ದ ವೇಳೆ ತಮ್ಮ ಹೇಳಿಕೆಯಿಂದ ಸೃಷ್ಟಿಯಾದ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಹೇಳಿಕೆಯ ಅರ್ಥ ಏನಿತ್ತು ಎಂಬ ಬಗ್ಗೆ ರಾಜ್ಯಾಧ್ಯಕ್ಷರಿಗೆ ವಿವರಣೆ ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಅರ್ಥದಲ್ಲಿ ನಾನು ಹೇಳಿಲ್ಲ

ಇನ್ನು ಇದೇ ವೇಳೆ ಸಚಿವ ಶ್ರೀರಾಮುಲು ತಮ್ಮ ಹೇಳಿಕೆ ಬಗ್ಗೆ ಮಾಧ್ಯಮಗಳಿಗೂ ಸ್ಪಷ್ಪನೆ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಅರ್ಥದಲ್ಲಿ ನಾನು ಹೇಳಿಲ್ಲ. ಡಿಕೆಶಿ, ಅವರ ನಡುವಿನ ಜಗಳ ನೋಡಿ ನಾನು ಹೇಳಿದ್ದೇನೆ. ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದು ಎಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮುಲು ಸ್ಪಷ್ಟನೆ ನೀಡಿದ್ದಾರೆ.

ಎಲ್ಲಾ ಸ್ಪಷ್ಟೀಕರಣ ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇನೆ. ಮೋದಿ ಬಂದಾಗ ವಿರೋಧ ಮಾಡಿದ್ದವರೂ ಬಿಜೆಪಿಗೆ ಬಂದಿದ್ದಾರೆ. ಹಿಂದುಳಿದ ಜಾತಿಗಳು ಒಂದಾಗಬೇಕು. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡಿದ್ರೆ ಕಾಂಗ್ರೆಸ್ ನಲ್ಲಿ ಕಿರಿ ಕಿರಿ ಕಾಣುತ್ತಿದೆ. ಅದನ್ನು ನೋಡಿದರೆ ಮುಂದೊಂದು ದಿನ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ ಅನ್ನೋ ಮನೋಭಾವದಿಂದ ಮಾತನಾಡಿದೆ. ಡಿ.ಕೆ. ಶಿವಕುಮಾರ್ ಮತ್ತು ಅವರ ನಡುವಿನ ಜಗಳ ನೋಡಿ ಇಲ್ಲಿಗೆ ಬರಬಹುದು ಅಂತ ಹೇಳಿದೆ. ನನ್ನ ಹೇಳಿಕೆಯ ಅರ್ಥ ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಅಲ್ಲ. ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದು. ಬಿಜೆಪಿ ಎಲ್ಲಿವರೆಗೂ ಇರುತ್ತೋ, ಎಲ್ಲಿವರೆಗೂ ಮೋದಿ ಪ್ರಧಾನಿ ಇರುತ್ತಾರೋ ಅಲ್ಲಿಯವರೆಗೂ ಕಾಂಗ್ರೆಸ್ ಗೆಲ್ಲಲ್ಲ. ಬಾದಾಮಿಗೆ ನಾನು ಹೋಗೋದು ತಡವಾಯಿತು, ಹಾಗಾಗಿ ಅವರು ಗೆದ್ದರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ನನ್ನ ಜೀವ ಇರೋವರೆಗೂ ನಾನು ಭಾರತೀಯ ಜನತಾ ಪಾರ್ಟಿಯಲ್ಲೇ ಇರುತ್ತೇನೆ. ಹೊಂದಾಣಿಕೆ ರಾಜಕಾರಣ ನನ್ನ ಜಾಯಮಾನದಲ್ಲಿ ಮಾಡಿಲ್ಲ. ಎಲ್ಲರನ್ನೂ ಎದುರಿಸಿಕೊಂಡು ರಾಜಕಾರಣ ಮಾಡಿದವನು ನಾನು ಎಂದರು.

ರಾಜ್ಯದಲ್ಲಿ ಬಿಜೆಪಿ ಟೆಂಟ್ ಖಾಲಿ ಮಾಡುವ ಸಮಯ ಬಂದಿದೆ

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಟೆಂಟ್ ಖಾಲಿ ಮಾಡುವ ಸಮಯ ಬಂದಿದೆ. ಹಾಗಾಗಿಯೇ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆಯಿಂದ ಒಪ್ಪಿಕೊಂಡಂತಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಪರೋಕ್ಷವಾಗಿ ಸಚಿವ ಬಿ.ಶ್ರೀರಾಮುಲು ಒಪ್ಪಿಕೊಂಡಂತಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಲೇವಡಿ ಮಾಡಿದ್ದಾರೆ.

ಬಿಜೆಪಿಯವರ ಬಯಕೆ ಶ್ರೀರಾಮುಲು ಹೇಳಿಕೆಯಿಂದ ವ್ಯಕ್ತವಾಗಿದೆ

ಮತ್ತೊಂದು ಕಡೆ ಇದೇ ವಿಚಾರವಾಗಿ ಟ್ವಿಟರ್ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಕೆಪಿಸಿಸಿ ಟಾಂಗ್ ಕೊಟ್ಟಿದೆ. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಬಯಕೆ ಜನರ ಬಯಕೆಯಷ್ಟೇ ಅಲ್ಲ, ಬಿಜೆಪಿಯವರ ಬಯಕೆಯೂ ಆಗಿದೆ. ಬಿಜೆಪಿಯವರ ಬಯಕೆ ಶ್ರೀರಾಮುಲು ಹೇಳಿಕೆಯಿಂದ ವ್ಯಕ್ತವಾಗಿದೆ ಎಂದು ಟ್ವಿಟರ್ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಕೆಪಿಸಿಸಿ ಟಾಂಗ್ ಕೊಟ್ಟಿದೆ. ಸಿಎಂ ಬೊಮ್ಮಾಯಿ ಅವರ ‘ತಳ್ಳುವ ಸರ್ಕಾರದ’ ಮೇಲೆ ನಂಬಿಕೆಯಿಲ್ಲ. ಜೆ.ಸಿ.ಮಾಧುಸ್ವಾಮಿಯಂತೆ ಸಚಿವ ಬಿ.ಶ್ರೀರಾಮುಲುಗೂ ನಂಬಿಕೆ ಇಲ್ಲ. ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ ಎಂದು ಟ್ವೀಟ್ ಮಾಡಿದೆ.

Published On - 3:01 pm, Wed, 17 August 22