ಪೀಣ್ಯ ಫ್ಲೈಓವರ್ ಟ್ರಾಫಿಕ್ ಜಾಂ ಭರ್ಜರಿ ಚರ್ಚೆ: ಸರ್ಕಾರ ನಿರುತ್ತರ
ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಏನಾಗಿದೆ ಎಂದು ಶಾಸಕ ಮಂಜುನಾಥ್ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಳೆ ಹಾನಿ ಚರ್ಚೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು ಕೂಡ ಕಲಾಪದಲ್ಲಿ ಚರ್ಚೆ ಮುಂದುವರೆದಿದ್ದು ಪ್ರಶ್ನೋತ್ತರ ಕಲಾಪದಲ್ಲಿ ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ನಿರ್ಬಂಧದಿಂದ ಸರ್ವಿಸ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಚಾರದ ಬಗ್ಗೆ ದಾಸರಹಳ್ಳಿ ಶಾಸಕ ಮಂಜುನಾಥ್ ಪ್ರಶ್ನೆ ಎತ್ತಿದ್ದಾರೆ.
ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಏನಾಗಿದೆ ಎಂದು ಶಾಸಕ ಮಂಜುನಾಥ್ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಇದನ್ನು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಉತ್ತರ ನೀಡಿದ್ದು, ಫ್ಲೈಓವರ್ ಕೇಬಲ್ ಕಟ್ ಆಗಿದ್ರಿಂದ ಸಂಚಾರ ನಿರ್ಬಂಧ ಮಾಡಲಾಗಿತ್ತು. ದುರಸ್ತಿ ಬಳಿಕ ಮತ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಾರೀ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಡಿಸೆಂಬರ್ ಒಳಗೆ ಸಮಸ್ಯೆ ಬಗೆಹರಿಸಿ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಕೊಡ್ತೇವೆ ಎಂದರು.
ಈ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದು, ಸಚಿವರು ಹೇಳಿದಂತೆ ಲಘು ವಾಹನಗಳಿಗೆ ಅವಕಾಶ ಕೊಡಲಾಗಿದೆ. ಭಾರೀ ವಾಹನಗಳಿಗೆ ಸುರಕ್ಷತೆ ಕ್ರಮ ಕೈಗೊಳ್ಳಬೇಕಾಗಿದೆ. ನಿತಿನ್ ಗಡ್ಕರಿಯವರು ಬಂದಾಗ ಸಮಸ್ಯೆ ಗಮನಕ್ಕೆ ತಂದಿದ್ದೇವೆ. ಭಾರೀ ವಾಹನಗಳ ಸಂಚಾರ ವಿಚಾರ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಅಗತ್ಯ ಕ್ರಮಗಳನ್ನು ಕೈಗೊಳ್ತೇವೆ. ಆದಷ್ಟು ಬೇಗ ಪೀಣ್ಯ ಫ್ಲೈಓವರ್ ಸಮಸ್ಯೆ ಬಗೆಹರಿಸ್ತೇವೆ ಎಂದರು. ಇದನ್ನೂ ಓದಿ: ಕಾಶಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದ ಅಮೆರಿಕದ ಮುಸ್ಲಿಂ ದಂಪತಿ
ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದ ಶಾಸಕ ಮಂಜುನಾಥ್
ಬೆಂಗಳೂರಿನ ಪೀಣ್ಯ ಫ್ಲೈಓವರ್ನಲ್ಲಿ ಸಮಸ್ಯೆ ಜಾಸ್ತಿ ಆಗಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಐಕಿಯಾ ಶೋ ರೂಮ್ನಿಂದಲೂ ವಾಹನ ದಟ್ಟಣೆ ಆಗ್ತಿದೆ ಎಂದು ಶಾಸಕ ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಸ್ಪೀಕರ್ ಕಾಗೇರಿ ಮಾತು ಕೇಳದೇ ಮಂಜುನಾಥ್ ಮಾತು ಮುಂದುವರೆಸಿದ್ದರು. ಈ ವೇಳೆ ಆರ್.ಮಂಜುನಾಥ್ ವಿರುದ್ಧ ಸ್ಪೀಕರ್ ಅಸಮಾಧಾನ ಹೊರ ಹಾಕಿದ್ರು. ಆಗ ಶಾಸಕ ಮಂಜುನಾಥ್ ನೆರವಿಗೆ ಬಂದ ಹೆಚ್.ಡಿ.ಕುಮಾರಸ್ವಾಮಿ, ಇತ್ತೀಚೆಗೆ ಸಿಎಂ ಬೊಮ್ಮಾಯಿ ಐಕಿಯಾ ಶೋರೂಂ ಉದ್ಘಾಟನೆ ಮಾಡಿದ್ದರು. ಶೋರೂಂನಿಂದ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಆಗುತ್ತಿದೆ. ಪಾರ್ಕಿಂಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೆಚ್ಡಿಕೆ ಮನವಿ ಮಾಡಿದ್ರು. ಜನ ಶೋರೂಂಗೆ ಉತ್ಸಾಹದಿಂದ ಬರುತ್ತಿರುವುದರಿಂದ ಪಾರ್ಕಿಂಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆಯಲ್ಲಿ ಪಿಡಬ್ಲ್ಯುಡಿ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:57 pm, Tue, 20 September 22