ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತೆಂದ ಲಕ್ಷ್ಮೀ ಹೆಬ್ಬಾಳ್ಕರ್: ವ್ಯಾಪಕ ವಿರೋಧ
ಓಟಿನ ರಾಜಕಾರಣಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿರುವುದು ವಿಷಾದಕರ. ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಕಾಂಗ್ರೆಸ್‌ನವರು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ಹೊರಗೆ ಇಡಬೇಕು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಅವರು ಆಕ್ರೋಶ ಹೊ ರಹಾಕಿದ್ದಾರೆ.
ಬೆಂಗಳೂರು, ಜ.08: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷದ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಈ ಬಗ್ಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಪ್ರತಿಕ್ರಿಯೆ ನೀಡಿದ್ದು ಸಿಎಂ ಸಿದ್ದರಾಮಯ್ಯ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ಹೊರಗೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿ ವಿಶಾಲ ಕರ್ನಾಟಕಕ್ಕೆ ಸೇರಿ ಅನೇಕ ವರ್ಷಗಳಾಗಿದೆ. ಓಟಿನ ರಾಜಕಾರಣಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿರುವುದು ವಿಷಾದಕರ. ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಕಾಂಗ್ರೆಸ್‌ನವರು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ಹೊರಗೆ ಇಡಬೇಕು. ಹೆಬ್ಬಾಳ್ಕರ್ ಆರೂವರೆ ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಹಾಗಾಗಿಯೇ ಬೆಳಗಾವಿ ಅಧಿವೇಶನ ಮಾಡಲಾಗುತ್ತಿದೆ. ಅವರ ಹೇಳಿಕೆ ಬೇರೆಯವರನ್ನು ಕೆರಳಿಸಲಿದೆ ಎಂದು ಬೆಂಗಳೂರಿನಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಆಕ್ರೋಶ ಹೊರ ಹಾಕಿದರು.
ಶಾಸಕ ಡಾ. ಅಶ್ವಥ್ ನಾರಾಯಣ್ ಮಾತನಾಡಿ, ಕರ್ನಾಟಕ ವಿವಿಧ ರಾಜ್ಯದಲ್ಲಿ ಹಂಚಿ ಹೋಗಿತ್ತು. ಅದಕ್ಕೆ ಕರ್ನಾಟಕ ಏಕೀಕರಣ ಆಗಿದ್ದು. ಇಂತಹ ಸಂದರ್ಭದಲ್ಲಿ ಹಿಂದಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆ. ಈ ಸಂದರ್ಭದಲ್ಲಿ ಅವಶ್ಯಕತೆ ಇರಲಿಲ್ಲ. ಬೆಳಗಾವಿ ಈಗ ಕರ್ನಾಟಕಕ್ಕೆ ಸೇರಿದೆ. ರಾಜಕೀಯ ಪ್ರೇರಿತ ಹುನ್ನಾರ ಆಗಬಾರದು. ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕು. ಕನ್ನಡಿಗರು ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣಬೇಕು. ಇವರ ಹೇಳಿಕೆಯನ್ನು ಮರಾಠಿಗರಾಗಲಿ, ಕನ್ನಡಿಗರಾಗಲಿ ಬೆಂಬಲಿಸಲ್ಲ ಎಂದರು.
ಇದನ್ನೂ ಓದಿ: ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿ ಮಹಿಳೆಯರಿಗೆ; ಪುರುಷರಿಗೆ ಯಾಕೆ ಇಲ್ಲ-ವಾಟಾಳ್
ಹೆಬ್ಬಾಳ್ಕರ್ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಅರ್ಥ ಮಾಡಿಕೊಳ್ಳಿ
ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತೆಂಬ ಹೇಳಿಕೆ ಸಂಬಂಧ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬಾಳ್ಕರ್ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಅರ್ಥ ಮಾಡಿಕೊಳ್ಳಿ. ಹಿಂದೆ ನಿಜಾಮರ ಕಾಲದಲ್ಲಿ ಬಳ್ಳಾರಿ ಸೇರಿ ಕೆಲ ಜಿಲ್ಲೆಗಳು ಇದ್ದವು. ವಿಜಯಪುರ, ಬೆಳಗಾವಿ, ಕಾರವಾರ, ಮುಂಬೈ ರಾಜ್ಯದಲ್ಲಿತ್ತು. ಈ ಅರ್ಥದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜ್ಯಗಳ ಪುನರ್ ವಿಂಗಡಣಾ ಬಳಿಕ ಎಲ್ಲವೂ ಸರಿಹೋಗಿದೆ. ರಾಜ್ಯಗಳ ಗಡಿ ವಿಚಾರದಲ್ಲಿ ನಮಗೆ ಮಹಾಜನ್ ವರದಿ ಅಂತಿಮ. ಈ ಹಿಂದೆ ಇತಿಹಾಸದಲ್ಲಿ ಇರುವುದನ್ನು ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜ್ಯ ಪುನರ್ ವಿಂಗಡಣೆ ಆದ ಮೇಲೆ ಎಲ್ಲವೂ ಬದಲಾಗಿದೆ. ಈ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ಕೂಡ ಬಹಳ ಸ್ಪಷ್ಟವಾಗಿದೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಜ.07ರ ಭಾನುವಾರ ನಡೆದ 6ನೇ ಕನ್ನಡ ಸಮಾವೇಶ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಭಾಷೆ ಹಲವು ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಸಾಹಿತಿಗಳು ಇದನ್ನು ಸಾಬೀತು ಮಾಡಿದ್ದಾರೆ. ನಮ್ಮ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತ್ರಿಗಳು ಲಭಿಸಿರೋದು ನಮ್ಮ ಹೆಮ್ಮೆ. ನಮ್ಮ ಕನ್ನಡ ಭಾಷೆ ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಇಂತಹ ನಾಡಿನಲ್ಲಿ ಜನಿಸಲು ನಾವು ಪುಣ್ಯ ಮಾಡಿರಬೇಕು. ಆದ್ರೆ ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಭಾಷಣದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:56 am, Mon, 8 January 24