ಬೆಂಗಳೂರು: ನಗರದ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಫೋಟಕ್ಕೆ ಸಂಬಂಧಿಸಿ ಬಹಳಷ್ಟು ಮಾಹಿತಿಗಳು ಲಭ್ಯವಾಗಿವೆ. ಸ್ಫೋಟದ ತೀವ್ರತೆಗೆ ಮೃತದೇಹ ಛಿದ್ರ ಛಿದ್ರವಾಗಿ, ಸುಮಾರು 20 ಮೀಟರ್ ಹಾರಿಬಂದು ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿದೆ. ನಿಗೂಢ ಸ್ಫೋಟದ ಬಗ್ಗೆ ಘಟನಾ ಸ್ಥಳದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಬಾಂಬ್ ಪತ್ತೆದಳ ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ನಿಗೂಢ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಪಟಾಕಿ ಅಂಗಡಿಯವರು ಮೃತಪಟ್ಟಿದ್ದಾರೆ ಹಾಗೂ ಮತ್ತೊಬ್ಬರು ಪಂಕ್ಚರ್ ಅಂಗಡಿಯಲ್ಲಿ ಇದ್ದವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್ ಹೇಳಿಕೆ ನೀಡಿದ್ದಾರೆ. ಘಟನೆಗೆ ಹೇಗೆ ಸಂಭವಿಸಿದೆ, ಕಾರಣವೇನೆಂದು ಗೊತ್ತಿಲ್ಲ. ಪಟಾಕಿ ಸ್ಟೋರೇಜ್ ಮಾಡುವವರನ್ನ, ಅನುಮತಿ ಇಲ್ಲದೇ ಮಾರಾಟ ಮಾಡುವವ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಗೈಡ್ ಲೈನ್ಸ್ ಪಾಲನೆ ಮಾಡಬೇಕು. ಕೆಲವರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿಗೂಢ ಸ್ಫೋಟಕ್ಕೆ ಕಿಟಕಿ ಗಾಜು ಪುಡಿಪುಡಿ ಆಗಿದೆ. ಮನೆ ಕಿಟಕಿ ಗಾಜು ಪುಡಿಯಾದ ಹಿನ್ನೆಲೆ ಜನರು ದಂಗಾಗಿದ್ದಾರೆ. ಸ್ಫೋಟದ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಘಟನೆಯ ದೃಶ್ಯ ಸೆರೆಯಾಗಿರುವುದು ಅನುಮಾನ ಎನ್ನಲಾಗಿದೆ. ಜೊತೆಗೆ, ವಿದ್ಯುತ್ ಸಂಪರ್ಕ ಇದ್ದಿದ್ದರೂ ದೊಡ್ಡ ಅನಾಹುತವಾಗುತ್ತಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಸಮಸ್ಯೆಯಾಗುವ ಸಾಧ್ಯತೆಯಿತ್ತು ಎಂದು ತಿಳಿದುಬಂದಿದೆ.
ಬೆಂಕಿ ಘಟನೆಗಳು ನಡೆದಿರುವುದು ದುರದೃಷ್ಟಕರ. ಗ್ಯಾಸ್ ಸಿಲಿಂಡರ್ನಿಂದ ಎರಡು ಘಟನೆಗಳು ನಡೆದಿವೆ. ಸೂಕ್ತ ಸುರಕ್ಷತಾ ಕ್ರಮಗಳಿಗೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಕಂದಾಯ ಸಚಿವ ಅಶೋಕ್ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಭೇಟಿ ನೀಡಿದ್ದಾರೆ. ಡಿಸಿಪಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ನಿಗೂಢ ಸ್ಫೋಟದಲ್ಲಿ ಮನೋಹರ, ಅಸ್ಲಾಂ ಎಂಬವರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳು ಏನು ಹೇಳುತ್ತಾರೆ?
ಜೇಮ್ಸ್, ಅನ್ಬುಸ್ವಾಮಿ, ಗಣಪತಿ ಎಂಬುವವರಿಗೆ ಘಟನೆಯಲ್ಲಿ ಗಾಯವಾಗಿದೆ. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಇಂಟೆಲಿಜೆನ್ಸ್ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಸ್ಫೋಟದ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಸ್ಥಳದಲ್ಲಿ ಏಕಾಏಕಿ ಭಾರಿ ಶಬ್ಧದೊಂದಿಗೆ ಸ್ಫೋಟವಾಯಿತು. ಏನು ಸ್ಫೋಟವಾಯಿತು ಎಂದು ನಮಗೆ ಗೊತ್ತಾಗಿಲ್ಲ ಎಂದು ಟಿವಿ9ಗೆ ಗಾಯಾಳು ಜೇಮ್ಸ್ ಹೇಳಿಕೆ ನೀಡಿದ್ದಾರೆ.
ಕಡಿಮೆ ತೀವ್ರತೆಯ ಸ್ಫೋಟಕಗಳು ಸಿಡಿದಿರುವ ಬಗ್ಗೆ ಶಂಕೆ ಎಂಬ ಬಗ್ಗೆ ಟಿವಿ9ಗೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಮಾಹಿತಿ ಲಭ್ಯವಾಗಿದೆ. ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿದ್ದ ಜಾಗದಲ್ಲಿ ಘಟನೆ ನಡೆದಿದೆ. ಎಫ್ಎಸ್ಎಲ್ ಟೀಮ್ ಪ್ರಾಥಮಿಕ ತನಿಖೆ ನಂತರವೇ ನಿಖರ ಕಾರಣ ತಿಳಿದುಬರಲಿದೆ. ಮೇಲ್ನೋಟಕ್ಕೆ ಕಡಿಮೆ ತೀವ್ರತೆಯುಳ್ಳ ಸ್ಫೋಟಕ ಸಿಡಿದಿದೆ ಎಂದು ಮಾಹಿತಿ ದೊರೆತಿದೆ.
ಜಮೀರ್ ಅಹ್ಮದ್ ಪರಿಹಾರ ಘೋಷಣೆ
ಘಟನಾ ಸ್ಥಳಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ನೀಡುವೆ. ವೈಯಕ್ತಿಕವಾಗಿ ನಾನು 2 ಲಕ್ಷ ಪರಿಹಾರ ನೀಡುತ್ತೇನೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ನಾನೇ ಭರಿಸುತ್ತೇನೆ. ಸರ್ಕಾರ ಕೂಡ ಮೃತರ ಕುಟುಂಬಗಳಿಗೆ ಪರಿಹಾರ ನೀಡಲಿ ಎಂದು ಹೇಳಿದ್ದಾರೆ. ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಿದ್ದ ಮಾಹಿತಿ ಇದೆ. ಗೋದಾಮಿನಲ್ಲಿಟ್ಟುಕೊಂಡು ಬೇರೆ ಕಡೆ ಸರಬರಾಜು ಮಾಡ್ತಿದ್ದ ಮಾಲೀಕನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಅಕ್ರಮವಾಗಿ ಪಟಾಕಿ ಸಂಗ್ರಹ?
ಸ್ಫೋಟದ ಸ್ಥಳದಲ್ಲಿ ಒಟ್ಟು 80 ಬಾಕ್ಸ್ ಪಟಾಕಿ ಇತ್ತು. ಆದ್ರೆ ಸ್ಫೋಟಗೊಂಡಿದ್ದು 1-2 ಬಾಕ್ಸ್ ಪಟಾಕಿ ಮಾತ್ರ. ಎಲ್ಲಾ ಪಟಾಕಿ ಸ್ಫೋಟಗೊಂಡಿದ್ರೆ ಭಾರಿ ಅನಾಹುತವಾಗ್ತಿತ್ತು. ಹೀಗಾಗಿ ನ್ಯೂ ತರಗುಪೇಟೆಯಲ್ಲಿ ದೊಡ್ಡ ದುರಂತ ತಪ್ಪಿದೆ ಎಂದು ಹೇಳಲಾಗಿದೆ. ವಿ.ವಿ.ಪುರಂ ಪೊಲೀಸರಿಂದ ಪ್ರಕರಣದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಗಾಯಾಳುಗಳು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ನಿಗೂಢ ಸ್ಫೋಟಕ್ಕೆ ಅಸಲಿ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಟ್ರಾನ್ಸ್ಪೋರ್ಟ್ ಗೋದಾಮಿಗೆ ಪಟಾಕಿ ಹೇಗೆ ಬಂತು? ಪಟಾಕಿ ಶೇಖರಣೆಗೆ ಯಾವುದೇ ಅನುಮತಿ ಪಡೆದಿಲ್ಲ. ಎಷ್ಟು ದಿನಗಳಿಂದ ಗೋದಾಮಿನಲ್ಲಿ ಪಟಾಕಿ ಶೇಖರಿಸಲಾಗಿತ್ತು? ಅಕ್ರಮವಾಗಿ ಸಂಗ್ರಹಣೆ ವಿಚಾರವಾಗಿ ಪೊಲೀಸರಿಂದ ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Gas Cylinder Blast: ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ! ಸಿಲಿಂಡರ್ ಸ್ಫೋಟ, ಮೂವರ ದೇಹಗಳು ಛಿದ್ರ ಛಿದ್ರ
ಇದನ್ನೂ ಓದಿ: ಬೆಂಗಳೂರು ಅಗ್ನಿ ಅವಘಡ: ತಾಯಿ- ಮಗಳು ಸಜೀವ ದಹನ; ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು ಕುಟುಂಬಸ್ಥರು
Published On - 3:07 pm, Thu, 23 September 21