ಬೆಂಗಳೂರು, ನವೆಂಬರ್ 29: ಬೆಂಗಳೂರಿನಲ್ಲಿ ಐಟಿ ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಎಂಬರ್ಥದಲ್ಲಿ ಉದ್ಯಮಿ ಟಿವಿ ಮೋಹನ್ ದಾಸ್ ಪೈ (TV Mohandas Pai) ಮಾಡಿರುವ ಟ್ವೀಟ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋಹನ್ ದಾಸ್ ಪೈಗೆ ಮಾಹಿತಿ ಕೊರತೆ ಇದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಂದೇ ಒಂದು ಕಂಪನಿ ಕರ್ನಾಟಕ ಬಿಟ್ಟು ಹೋಗಿಲ್ಲ. ಕೆಲವರಿಗೆ ಕರ್ನಾಟಕ ವಿರೋಧಿ ಹೇಳಿಕೆ ನೀಡುವುದು ಹವ್ಯಾಸವಾಗಿಬಿಟ್ಟಿದೆ. ಪದೇ ಪದೇ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದೇ ಮೋಹನ್ ದಾಸ್ ಪೈ ಬೇರೆ ಬೇರೆ ರಾಜ್ಯಗಳ ಕಂಪನಿಗೆ ಬಂಡವಾಳ ಹೂಡಿಕೆ ಮಾಡುವುದಿಲ್ಲವೇ? ಅವರು ಡೈವರ್ಸಿಫಿಕೇಷನ್ ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ? ಕನ್ನಡಿಗರ ಪರವಾಗಿ ಮಾತನಾಡುವುದು ಬಿಟ್ಟು ಈ ರೀತಿ ಮಾತನಾಡಬಾರದು. ಅವರು ಒಂದೇ ಒಂದು ಕಂಪನಿಯ ಉದಾಹರಣೆ ನೀಡಲಿ ನೋಡೋಣ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾಕುವುದು ಬೇಡ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇವರೇ (ಮೋಹನ್ ದಾಸ್ ಪೈ) ಅಲ್ವಾ ಎಲ್ಲ ವಿಷನ್ ಗ್ರೂಪ್ನಲ್ಲಿ ಇದ್ದವರು? ಫಿಲಿಪ್ಸ್ ಇನೊವೇಶನ್ ರಾಜ್ಯಕ್ಕೆ ಬಂದಾಗ ಇವರು ಬೆನ್ನು ತಟ್ಟಿದ್ದರೇ? ಸಕಾರಾತ್ಮಕವಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡ್ತೇವೆ. ಅವರ ಮಾತುಗಳಿಂದ ನಮಗೆ ರಾಜ್ಯಕ್ಕೆ ಬಂಡವಾಳ ಬರುತ್ತದೆ ಎಂದು ಭಾವಿಸುತ್ತೇವೆ. ಪದೇ ಪದೇ ಯಾಕೆ ಹೀಗೆ ನೆಗೆಟಿವ್ ಆಗಿ ಮಾತನಾಡ್ತಾರೆ ಗೊತ್ತಿಲ್ಲ. ಯಾವ ಬಂಡವಾಳ ಕೂಡ ರಾಜ್ಯದಿಂದ ವಾಪಸ್ ಹೊರಗಡೆ ಹೋಗಿಲ್ಲ. ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವಂತ ವ್ಯಕ್ತಿ ಅವರಲ್ಲ. ಆದರೆ ಪದೇ ಪದೇ ಕರ್ನಾಟಕ ವಿರೋಧಿ ನಿಲುವು ತಾಳಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಉದ್ಯಮಿ ಟಿವಿ ಮೋಹನ್ ದಾಸ್ ಪೈ ಟ್ವೀಟ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಹೀಗಿತ್ತು
Will Hyderabad Dethrone Bangalore’s IT Status? continued neglect of Bengaluru by successive govts over last 10 years has led to this. Hope govt shows more energy to improve city @CMofKarnataka @siddaramaiah @DKShivakumar https://t.co/sG4uCv6edK
— Mohandas Pai (@TVMohandasPai) November 29, 2023
‘ಐಟಿ ನಗರವೆಂಬ ಬೆಂಗಳೂರಿನ ಹೆಗ್ಗಳಿಕೆ ಹೈದರಾಬಾದ್ ಪಾಲಾಗುವುದೇ? ಕಳೆದ 10 ವರ್ಷಗಳಿಂದ ಸತತವಾಗಿ ಬೆಂಗಳೂರನ್ನು ನಿರ್ಲಕ್ಷಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ನಗರವನ್ನು ಸುಧಾರಿಸಲು ಸರ್ಕಾರವು ಹೆಚ್ಚು ಒತ್ತು ನೀಡಲಿದೆ ಎಂಬುದಾಗಿ ಭಾವಿಸುತ್ತೇವೆ’ ಎಂದು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಆಫ್ ಕರ್ನಾಟಕ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ