ಬೆಂಗಳೂರು: ನೆರೆಪೀಡಿತ ಪ್ರದೇಶದ ಪಟ್ಟಿಗೆ ಮೂಡಿಗೆರೆ ಸೇರ್ಪಡೆಗೆ ಎಂ.ಪಿ.ಕುಮಾರಸ್ವಾಮಿ ಮಾಡಿದ ಪ್ರತಿಭಟನೆಗೆ ಫಲ ಸಿಕ್ಕಿದೆ. ವಿಧಾನಸೌಧದ ಬಳಿ ಏಕಾಂಗಿಯಾಗಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾಡಿದ ಪ್ರತಿಭಟನೆಗೆ ಮಣಿದ ಸರ್ಕಾರ ಮೂಡಿಗೆರೆ ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಿದೆ.
ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೆರೆ ಪರಿಹಾರದಲ್ಲಿ ತಾರತಮ್ಯ ಎಂದು ಆರೋಪ ಮಾಡಿದ್ದರು. ಈ ವೇಳೆ ರಾಜ್ಯ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿತ್ತು. ಸದ್ಯ ಕಡೆಗೂ ಮೂಡಿಗೆರೆಯನ್ನ ನೆರೆ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, 61 ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೆವು. ಮಳೆ ಹೆಚ್ಚಾಗಿ ಮತ್ತೆ ಹಾನಿಯಾಗಿದೆ. ಹೊಸದಾಗಿ 22 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ ಮಾಡಿದ್ದೇವೆ. ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರಿಕೆರೆ, ಸೂಪ ಬಬಲೇಶ್ವರ, ಕೋಲಾರ, ಮುದ್ದೆಬಿಹಾಳ, ಮೂಡಿಗೆರೆ, ಹೊಸನಗರಗಳನ್ನ ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ.
ಬೆಂಗಳೂರಿನಲ್ಲೂ 50ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚಿಸಿದ್ದೇನೆ. ಜೊತೆಗೆ ಸಮಸ್ಯೆ ಪರಿಹಾರಕ್ಕೂ ಸೂಚಿಸಿದ್ದೇನೆ. ತುರ್ತು ಕಾಮಗಾರಿ ಮುಗಿಸುವ ಬಗ್ಗೆ ತಿಳಿಸಿದ್ದೇನೆ ಎಂದರು.
ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಯಾಕೋ ಬೆಲೆ ಸಿಗ್ತಿಲ್ಲ. ಮೀಸಲು (ರಿಸರ್ವ್) ಕ್ಷೇತ್ರವೆಂಬ ಕಾರಣಕ್ಕೋ ಏನೋ ಕಡೆಗಣಿಸ್ತಿದ್ದಾರೆ ಎಂದು ವಿಧಾನಸೌಧದ ಎದುರು ಮೆಟ್ಟಿಲಿನ ಮೇಲೆ ಏಕಾಂಗಿಯಾಗಿ ಧರಣಿ ಕುಳಿತಿರುವ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ನೊಂದುಕೊಂಡು ಹೇಳಿದ್ರು. ನಮ್ಮದೇ ಸರ್ಕಾರ ಈ ರೀತಿ ತಾರತಮ್ಯ ಮಾಡಬಾರದು. ನಮ್ಮದು ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ ಅನಿಸುತ್ತಿದೆ. ಸಚಿವ ಆರ್.ಅಶೋಕ್ ಈ ರೀತಿ ಮಾಡಿದ್ದಾರೆ ಅನಿಸುತ್ತಿಲ್ಲ. ಎಲ್ಲ ಉಸ್ತುವಾರಿ ಸಚಿವರು ಭೇಟಿ ನೀಡ್ತಾರೆ, ಏನೂ ಮಾಡಲ್ಲ. ಇವರಿಗೆ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ, ಹೀಗಾಗಿ ಧರಣಿ ಕುಳಿತಿರುವೆ ಎಂದು ವಿಧಾನಸೌಧದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: MP Kumaraswamy: ವಿಧಾನಸೌಧ ಎದುರು ಧರಣಿ ಕುಳಿತ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ! ಡಿಮ್ಯಾಂಡ್ ಏನು?