ಬೆಂಗಳೂರು, ಅಕ್ಟೋಬರ್ 12: ತಮಿಳುನಾಡಿನ ಕವರಪೆಟ್ಟೈ ರೈಲು ನಿಲ್ದಾಣಗಳಲ್ಲಿ ಶುಕ್ರವಾರ ರಾತ್ರಿ ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸಪ್ರೆಸ್ ರೈಲು ಅಪಘಾತಕ್ಕೀಡಾಗಿತ್ತು (Mysore Darbhanga train accident). ಪರಿಣಾಮ ಶನಿವಾರ (ಅ.12) ಬೆಂಗಳೂರಿನಿಂದ ಹೊರಡುವ ಎರಡು ರೈಲುಗಳ ಮಾರ್ಗ ಬದಲಾಯಿಸಲಾಗಿದೆ (Train Route Change).
ಶನಿವಾರ ಬೆಳಗ್ಗೆ 8.50ಕ್ಕೆ ಹೊರಡುವ ಎಸ್ಎಂವಿಟಿ ಬೆಂಗಳೂರು-ಕಾಮಾಕ್ಯ (ರೈಲು ಸಂಖ್ಯೆ: 12551) ಎಸಿ ಎಕ್ಸಪ್ರೆಸ್ ರೈಲು ಧರ್ಮಾವರಂ, ವಿಜಯವಾಡ ಮಾರ್ಗವಾಗಿ ಸಂಚರಿಸಲಿದೆ. ಇದರಿಂದಾಗಿ ಜೋಳರಪೆಟ್ಟೈ, ಕಟ್ಟಾಡಿ, ಪೆರಂಬೂರು ಹಾಗೂ ಗೂಡೂರು ನಿಲ್ದಾಣಗಳು ಬಿಟ್ಟು ಹೋಗಲಿವೆ.
ಬೆಳಗ್ಗೆ 9.15ಕ್ಕೆ ಹೊರಡುವ ಎಸ್ಎಂವಿಟಿ ಬೆಂಗಳೂರು-ದಾನಪುರ ಸಂಗಮಿತ್ರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12295) ರೈಲು, ಧರ್ಮಾವರಂ, ಕಾಜೀಪೇಟ್ ಮಾರ್ಗವಾಗಿ ಹೋಗಲಿದೆ. ಕೆಆರ್ಪುರ, ಬಂಗಾರಪೇಟೆ, ಕುಪ್ಪಂ, ಜೋಳರವಟ್ಟೈ, ಕಟ್ಟಾಡಿ, ಆರಕೋಣಂ, ಪೆರಂಬೂರ್, ಗೂಡೂರ್, ನೆಲ್ಲೂರು, ಒಂಗೋಲ್, ವಿಜಯವಾಡ ಹಾಗೂ ವಾರಂಗಲ್ ನಿಲ್ದಾಣಗಳು ತಪ್ಪಲಿವೆ.
ಇದನ್ನೂ ಓದಿ: ಮೈಸೂರು-ದರ್ಬಾಂಗ ಪ್ರೆಸ್ ರೈಲು ಅಪಘಾತ: ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ -ಸೋಮಣ್ಣ
ಶುಕ್ರವಾರ ಮೈಸೂರಿನಿಂದ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣ ದಾಟಿ ಹೋಗ್ತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಪೆರಂಬೂರು ದಾಟಿದ್ದ ರೈಲು, ದರ್ಬಾಂಗದತ್ತ ಪ್ರಯಾಣ ಬೆಳೆಸಿತ್ತು. ಆದ್ರೆ, 75 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು, ಕಾವರಪೇಟ್ಟೈ ತಲುಪುತ್ತಿದ್ದಂತೆ ಲೂಪ್ ಲೇನ್‌ನಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.
ಪೆರಂಬೂರು ದಾಟಿ ಕಾವರಪೇಟ್ಟೈಗೆ ಎಕ್ಸ್‌ಪ್ರೆಸ್ ರೈಲು ತೆರಳುತ್ತಿತ್ತು. ಕಾವರ ಪೇಟ್ಟೈ ರೈಲು ನಿಲ್ದಾಣದಲ್ಲಿ ಮುಖ್ಯ ಲೇನ್‌ಗೆ ಹೋಗುವಂತೆ ಸೂಚನೆ ಸಿಗ್ನಲ್ ನೀಡಿದ್ದರು. ಆದರೆ, ಮೇನ್ ಲೇನ್‌ಗೆ ಸಿಗ್ನಲ್ ಇದ್ದರೂ ಗೂಡ್ಸ್ ರೈಲು ನಿಂತಿದ್ದ ಲೂಪ್ ಲೇನ್ ಟ್ರ್ಯಾಕ್‌ಗೆ ರೈಲು ನುಗ್ಗಿತ್ತು. 75 ಕಿಮೀ ವೇಗದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಎಲ್ಲರಿಗೂ ಭೂಕಂಪನದ ಅನುಭವವಾಗಿತ್ತು. 12ರಿಂದ 13 ಬೋಗಿಗಳು ಹಳಿ ತಪ್ಪಿ ಅಕ್ಕಪಕ್ಕಕ್ಕೆ ಬಂದು ಬಿದ್ದಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ