ಮಿನಿ ಬಾಲಭವನ ಸುತ್ತ ಕಸದ ಕಾರುಬಾರು; ರಸ್ತೆಯಲ್ಲೇ ರಾಶಿ ರಾಶಿ ಕಸ ಬೀಳ್ತಿದ್ರೂ, ಪಾಲಿಕೆ ಮೌನ
ಅದು ಮಕ್ಕಳಿಗೆ ಆಟ ಆಡೋಕೆ ಅಂತಾ ಸರ್ಕಾರದಿಂದ ನಿರ್ಮಿಸಿರೋ ಆಟದ ಮೈದಾನ. ಆದ್ರೆ ಇದೀಗ ಆ ಆಟದ ಮೈದಾನ ಬಿಬಿಎಂಪಿಯ ಡಪಿಂಗ್ ಯಾರ್ಡ್ ರೀತಿ ಬದಲಾಗಿಬಿಟ್ಟಿದೆ. ಕಾಂಪೌಂಡ್ ಪಕ್ಕದ ರಸ್ತೆ ಕಸ ಎಸೆಯೋ ಬ್ಲಾಕ್ ಸ್ಪಾಟ್ ಆಗಿ ಬದಲಾಗಿದ್ದು, ಕಸದ ರಾಶಿಯಿಂದ ಏರಿಯಾ ಜನರು ಹೈರಾಣಾಗಿಬಿಟ್ಟಿದ್ದಾರೆ. ಬೆಂಗಳೂರನ್ನ ಕ್ಲೀನ್ ಬೆಂಗಳೂರು ಮಾಡ್ತೀವೆ ಅಂತಿರೋ ಪಾಲಿಕೆ, ಈ ಏರಿಯಾದಲ್ಲಿ ಕಸದ ಸಮಸ್ಯೆ ತಾಂಡವವಾಡ್ತಿದ್ರೂ ಸೈಲೆಂಟ್ ಆಗಿರೋದು ನಿವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ.
ಬೆಂಗಳೂರು, ಅ.12: ರಾಜಧಾನಿಯನ್ನ ಕ್ಲೀನ್ ಸಿಟಿ ಮಾಡ್ತೀವೆ, ಗ್ರೀನ್ ಸಿಟಿ ಮಾಡ್ತೀವೆ ಎನ್ನುತ್ತಿರುವ ಬಿಬಿಎಂಪಿ(BBMP), ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಕಸದ ಸಮಸ್ಯೆ ತಾಂಡವವಾಡ್ತಿದ್ರೂ ಸೈಲೆಂಟ್ ಆಗಿದೆ. ಆರ್.ಆರ್.ನಗರ ವಲಯದ ಜೀವನ್ ಭೀಮಾನಗರದಲ್ಲಿರೋ ಮಿನಿ ಬಾಲಭವನ ಸುತ್ತಮುತ್ತಲಿನ ಪ್ರದೇಶ ಕಸದ ಡಂಪಿಂಗ್ ಜಾಗವಾಗಿ ಬದಲಾಗಿದೆ. ನಿತ್ಯ ಇದೇ ಜಾಗದಲ್ಲಿ ಬೇರೆ ಬೇರೆ ಏರಿಯಾ ಜನರು ಕಸ ಸುರಿಯುತ್ತಿರೋದು ಇಡೀ ರಸ್ತೆ ಗಬ್ಬುನಾರುವಂತೆ ಮಾಡಿಬಿಟ್ಟಿದೆ.
ಇನ್ನು ಈ ಏರಿಯಾದ ರಸ್ತೆಗಳಲ್ಲಿ ಇ-ಶೌಚಾಲಯ ನಿರ್ಮಿಸಿರೋ ಪಾಲಿಕೆ, ಇ.ಟಾಯ್ಲೆಟ್ ಗಳ ನಿರ್ವಹಣೆಯನ್ನ ಮರೆತಿರೋದು ಶೌಚಾಲಯ ಕೂಡ ಗಬ್ಬೆದ್ದು ನಾರುವಂತೆ ಮಾಡಿದೆ. ಇತ್ತ ಶೌಚಾಲಯದ ಹಿಂದೆಯೇ ಇಂದಿರಾ ಕ್ಯಾಂಟೀನ್ ಇರೋದರಿಂದ ಊಟಕ್ಕೆ ಬರೋ ಜನರಿಗೂ ಕಸ, ಟಾಯ್ಲೆಟ್ ಸಮಸ್ಯೆ ಕಿರಿಕಿರಿ ತಂದಿಡುತ್ತಿದೆ. ಇತ್ತ ಏರಿಯಾಗೆ ಕಸ ಸಂಗ್ರಹಕ್ಕೆ ಬರೋ ಪಾಲಿಕೆ ಸಿಬ್ಬಂದಿ ಸರಿಯಾಗಿ ಕಸ ಸಂಗ್ರಹ ಮಾಡ್ತಿಲ್ಲ, ಅದರಿಂದ ಜನರು ಎಲ್ಲಿ ಬೇಕು ಅಲ್ಲಿ ಕಸ ಎಸೆದು ಹೋಗ್ತಿದ್ದಾರೆ, ಇದರಿಂದ ರಸ್ತೆಯಲ್ಲಿ ಓಡಾಡೋಕು ಆಗ್ತಿಲ್ಲ ಅಂತಾ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನ ಕೊಲೆ; ಆರೋಪಿಗಳ ಕಾಲಿಗೆ ಗುಂಡೇಟು
ಒಟ್ಟಿನಲ್ಲಿ ಒಂದೆಡೆ ನಡುರಸ್ತೆಯಲ್ಲಿ ಬಿದ್ದಿರೋ ಕಸದ ರಾಶಿ ಏರಿಯಾ ಜನರಿಗೆ ಸಂಕಷ್ಟ ತಂದಿಟ್ಟಿದ್ರೆ, ಅತ್ತ ಮಿನಿ ಬಾಲಭವನದ ಪಕ್ಕದಲ್ಲೇ ಇರೋ ಗಬ್ಬೆದ್ದು ನಾರುತ್ತಿರೋ ಬಿಬಿಎಂಪಿಯ ಇ ಟಾಯ್ಲೆಟ್ ಅನಾರೋಗ್ಯ ತಂದಿಡುವ ಮುನ್ಸೂಚನೆ ನೀಡ್ತಿದೆ. ಸದ್ಯ ಆಟದ ಮೈದಾನ ಹಾಗೂ ಏರಿಯಾದ ಮಕ್ಕಳು ಹೆಚ್ಚಾಗಿ ಓಡಾಡೋ ರಸ್ತೆಗಳಲ್ಲಿ ಅನೈರ್ಮಲ್ಯ ತಾಂಡವವಾಡ್ತಿದ್ದು, ಪಾಲಿಕೆ ಆದಷ್ಟು ಬೇಗ ಸ್ವಚ್ಚತೆ ಕಾಪಾಡುವತ್ತ ನಿಗಾ ಇಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ