ಬೆಂಗಳೂರು, ಜ.10: ಹೊಸ ವರ್ಷದ ಹಿನ್ನೆಲೆ ಡಿ.31ರಂದು ಒಂದೇ ದಿನದಲ್ಲಿ ಬಿಎಂಆರ್ಸಿಎಲ್ಗೆ (BMRCL) ಬರೋಬ್ಬರಿ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಹರಿದು ಬಂದಿತ್ತು. ಇದೀಗ ನಮ್ಮ ಮೆಟ್ರೋ (Namma Metro) ಇಡೀ ಡಿಸೆಂಬರ್ ತಿಂಗಳ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಡಿಸೆಂಬರ್ನಲ್ಲಿ ನಮ್ಮ ಮೆಟ್ರೋಗೆ ದಾಖಲೆ ಪ್ರಮಾಣದಲ್ಲಿ ಆದಾಯ ಹರಿದುಬಂದಿದೆ. ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 2 ಕೋಟಿ ಜನರು ಮೆಟ್ರೋ ಬಳಕೆ ಮಾಡಿದ್ದು ₹55 ಕೋಟಿ ಆದಾಯ ಸಂಗ್ರಹವಾಗಿದೆ.
ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ನಮ್ಮ ಮೆಟ್ರೋ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಅತ್ಯಧಿಕ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ದಾಖಲೆ ಬರೆದಿದೆ. ಡಿಸೆಂಬರ್ ಒಂದೇ ತಿಂಗಳಲ್ಲಿ ಬರೋಬ್ಬರಿ 2 ಕೋಟಿ ಜನರು ಮೆಟ್ರೋ ಬಳಕೆ ಮಾಡಿದ್ದಾರೆ. ದಿನಕ್ಕೆ ಸರಾಸರಿ 6.88 ಲಕ್ಷ ಜನರು ಸಂಚಾರ ಮಾಡಿದ್ದಾರೆ. ವರ್ಷದ ಕೊನೆ ತಿಂಗಳಾದ ಡಿಸೆಂಬರ್ನಲ್ಲಿ ಬರೋಬ್ಬರಿ ₹55 ಕೋಟಿ ಆದಾಯ ಹರಿದು ಬಂದಿದೆ. ಡಿಸೆಂಬರ್ ನ ಒಟ್ಟು ಪ್ರಯಾಣಿಕರ ಸಂಖ್ಯೆ 2,13,34,076. ದಿನದ ಸರಾಸರಿ ಪ್ರಯಾಣಿಕರ ಸಂಖ್ಯೆ 6,88,196 . ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ ಎಂದು ಟಿವಿ9ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೆಟ್ರೋದಲ್ಲಿ ಸಾಲು ಸಾಲು ಅವಘಡ; ಎಚ್ಚೆತ್ತ ಬಿಎಂಆರ್ಸಿಎಲ್, ಪ್ರಯಾಣಿಕರ ಸುರಕ್ಷತೆಗೆ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ನಿರ್ಮಾಣ
ಇನ್ನು ಡಿ.31ರ ಭಾನುವಾರ ನಮ್ಮ ಮೆಟ್ರೋದಲ್ಲಿ 6 ಲಕ್ಷ 26 ಸಾವಿರದ 202 ಜನ ಸಂಚಾರ ಮಾಡಿದ್ದು, ಹೊಸ ವರ್ಷದ ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಏರಿಕೆಯಾಗಿತ್ತು. ಅಂದು ಬಂದೇ ದಿನ ಬರೊಬ್ಬರಿ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಬಂದಿದೆ. ಸಾಮಾನ್ಯವಾಗಿ ಭಾನುವಾರ ಮೆಟ್ರೋ ಪ್ರಯಾಣಿಕರ ಸಂಖ್ಯೆ 5 ಲಕ್ಷ ದಾಟೋದು ಡೌಟ್. ಆದರೆ ಡಿ.31ರಂದು ಹೊಸ ವರ್ಷ ಬಂದ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ನ್ಯೂ ಇಯರ್ ಹಿನ್ನೆಲೆ ರಾತ್ರಿ 2.15 ಗಂಟೆ ತನಕ ನಮ್ಮ ಮೆಟ್ರೋ ಸೇವೆ ಇತ್ತು. ದಟ್ಟಣೆ ಹೆಚ್ಚಿರುವ ಹಿನ್ನೆಲೆ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಮಧ್ಯರಾತ್ರಿ ಟಿಕೆಟ್ ವಿತರಣೆ ಇರಲಿಲ್ಲ. ಆ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ 50 ರೂಪಾಯಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವಿತರಿಸಲಾಗಿತ್ತು. ಮುಂಚಿತವಾಗಿಯೇ ಪ್ರಯಾಣಿಕರು ರಿಟರ್ನ್ ಜರ್ನಿ ಟಿಕೆಟ್ ಖರೀದಿ ಕೂಡ ಮಾಡಿದ್ರು. ಇನ್ನು ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಗೆ ಎಂದಿನಂತೆ ರಿಯಾಯಿತಿ ಇತ್ತು. ಅಲ್ಲದೆ ರಾತ್ರಿ 11.30ರ ನಂತರ ಎಂ.ಜಿ. ರಸ್ತೆಯ ಮೆಟ್ರೋ ನಿಲ್ದಾಣ ಪ್ರವೇಶ ನಿರ್ಬಂಧವಿತ್ತು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ