ಬೆಂಗಳೂರು, ಜುಲೈ 12: ನಮ್ಮ ಮೆಟ್ರೋ ಈಗ ಬೆಂಗಳೂರಿನಲ್ಲಿ ವೇಗವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಅತ್ತ ಒಂದಿಲ್ಲೊಂದು ಕಾರಣದಿಂದ ವಿಳಂಬವಾಗುತ್ತಿದ್ದ ನಾಗಸಂದ್ರದಿಂದ ಮಾದವಾರ ಬಿಐಇಸಿ ಮೆಟ್ರೋ ನಿಲ್ದಾಣವರೆಗಿನ 3.2 ಕಿಮೀ ವಿಸ್ತರಿತ ಮಾರ್ಗ ಜನ ಬಳಕೆಗೆ ಮುಕ್ತ ಆಗುವ ಕಾಲ ಸನ್ನಿಹಿತದಲ್ಲಿದೆ. ಸದ್ಯದಲ್ಲೇ ಲೋಕಾರ್ಪಣೆ ಮಾಡಲು ತಯಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಮಾದಾವರ ನಡುವಣ ಸಂಚಾರ ಸುಗಮವಾಗಲಿದೆ.
ನಾಗಸಂದ್ರ – ಮಾದಾವರ ಮೆಟ್ರೋ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಸುಳಿವು ನೀಡಿದ್ದಾರೆ.
ನಮ್ಮ ಮೆಟ್ರೋ ಹಸಿರು ಮಾರ್ಗದ ಶೀಘ್ರ ವಿಸ್ತರಣೆಯತ್ತ ಬಿಎಂಆರ್ಸಿಎಲ್ ಗಮನಹರಿಸಿದೆ. ಈ ಮಾರ್ಗ ವಿಸ್ತರಣೆ ಮಾಡುವುದರಿಂದ ನೆಲಮಂಗಲ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಮತ್ತಷ್ಟು ಹತ್ತಿರ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಾದಾವರ ಮೆಟ್ರೋ ಸ್ಟೇಷನ್ನಿಂದ ನೆಲಮಂಗಲಕ್ಕೆ ಕೇವಲ ಆರು ಕಿಮೀ ಮಾತ್ರ ದೂರವಿದೆ. ಸಿಟಿಗೆ ಹೋಗಿ ಬರುವುದಕ್ಕೆ ಸುಲಭ ಆಗುತ್ತದೆ. ಮಂಜುನಾಥ ನಗರ, ಚಿಕ್ಕ ಬಿದರಕಲ್ಲು, ಮಾದಾವರವರೆಗೆ ಸಂಪರ್ಕ ಕಲ್ಪಿಸಲಿರುವ ಹಸಿರು ಮಾರ್ಗ ಇದಾಗಿದ್ದು, ಸದ್ಯ ಮಾರ್ಗದಲ್ಲಿ ಸಿಗ್ನಲಿಂಗ್ ಟೆಸ್ಟ್ ಕೆಲಸ ಪ್ರಗತಿಯಲ್ಲಿದೆ.
ಮಾರ್ಗದ ವಿಸ್ತರಣೆ ಕಾಮಗಾರಿ ಆರಂಭದಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ನಾಗಸಂದ್ರ – ಮಾದವಾರ ನಡುವಿನ ಮೂರು ಕಿಮೀ ಮೆಟ್ರೋ ಕಾಮಗಾರಿ 2017 ರಲ್ಲಿ ಪ್ರಾರಂಭವಾಯಿತು. 2019 ರ ಮಧ್ಯದ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಿತ್ತಾದರೂ, ಭೂಸ್ವಾಧೀನದಲ್ಲಿ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಸಾಗಿತು. ಭೂಸ್ವಾಧೀನ ಸಮಸ್ಯೆಗಳು, ವಿಶೇಷವಾಗಿ ನೈಸ್ ರಸ್ತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬ ಮತ್ತು ಕೋವಿಡ್ ಸಾಂಕ್ರಾಮಿಕ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣಗಳಾಗಿವೆ.
ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 4 ದಿನ ಸಂಚಾರ ಬಂದ್: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್ ಪೊಲೀಸ್
ನಾಗಸಂದ್ರ – ಮಾದವಾರ ಮೆಟ್ರೋ ಮಾರ್ಗ ಲೋಕಾರ್ಪಣೆ ಬಗ್ಗೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಸದ್ಯದಲ್ಲೇ ನಮ್ಮ ಮೆಟ್ರೋ ನಾಗಸಂದ್ರ – ಮಾದವಾರ ಸಂಚಾರ ಆರಂಭವಾಗುವ ಸುಳಿವು ದೊರೆತಿದ್ದು, ಇದರಿಂದ ಜನರ 5 ವರ್ಷದ ಕಾಯುವಿಕೆ ಕೊನೆಗೂ ಅಂತ್ಯ ಆಗುವ ಲಕ್ಷಣ ಕಾಣಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ