ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ: ಇನ್ನು ಮುಂದೆ 191 ಸ್ಟೇಷನ್‌ಗಳಲ್ಲೂ ಬರಲಿದೆ ‘ಪಿಎಸ್ಡಿ’ ಡೋರ್!
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಯತ್ನ ಪ್ರಕರಣಗಳಿಗೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಮಹತ್ವದ ಮಾಸ್ಟರ್ ಪ್ಲಾನ್ ಮಾಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು 191 ಮೆಟ್ರೋ ಸ್ಟೇಷನ್‌ಗಳಲ್ಲಿ 1,273.83 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪಿಎಸ್ಡಿ (Platform Screen Door) ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದ್ದು, ಕೇಂದ್ರದ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಕಾಮಗಾರಿ ಆರಂಭವಾಗಲಿದೆ.

ಮುಖ್ಯಾಂಶಗಳು
- ಆತ್ಮಹತ್ಯೆ ತಡೆಯಲು ನಮ್ಮ ಮೆಟ್ರೋದ 191 ನಿಲ್ದಾಣಗಳಲ್ಲಿ ಪಿಎಸ್ಡಿ ಬರಲಿದೆ.
- ಬೃಹತ್ ಪಿಎಸ್ಡಿ ಯೋಜನೆಗಾಗಿ ಬಿಎಂಆರ್‌ಸಿಎಲ್ 1,273 ಕೋಟಿ ರೂ. ವೆಚ್ಚ ಮಾಡಲಿದೆ.
- ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಕೇಂದ್ರದ ಅನುಮತಿ ಬಾಕಿಯಿದೆ.
ಬೆಂಗಳೂರು, ಜುಲೈ 17: ನಗರದ ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಆತ್ಮಹತ್ಯೆ ಯತ್ನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ಪ್ರಯಾಣಿಕರ ಸುರಕ್ಷತೆಗಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ಅಳವಡಿಸಲು ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಪ್ರಯಾಣಿಕರು ಮೆಟ್ರೋ ಟ್ರ್ಯಾಕ್‌ಗೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದ ಘಟನೆಗಳು ವರದಿಯಾಗಿದ್ದವು. ಈ ಬಗ್ಗೆ ಟಿವಿ9 ಕನ್ನಡ ಸಾಕಷ್ಟು ಬಾರಿ ವಿಶೇಷ ವರದಿಗಳನ್ನು ಬಿತ್ತರಿಸಿ, ನಿಗಮದ ಗಮನ ಸೆಳೆದಿತ್ತು. ಸದ್ಯ ಪ್ರಯಾಣಿಕರ ನಿರಂತರ ಒತ್ತಾಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬಿಎಂಆರ್‌ಸಿಎಲ್ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
1,273 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ
ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಗೋಡೆಯಂತೆ ಕಾರ್ಯನಿರ್ವಹಿಸುವ ಈ ಪಿಎಸ್ಡಿ (PSD) ವ್ಯವಸ್ಥೆಯನ್ನು ಒಟ್ಟು 1,273.83 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಮ್ಮ ಮೆಟ್ರೋದ ಗ್ರೀನ್, ಪರ್ಪಲ್, ಯೆಲ್ಲೋ, ಬ್ಲೂ, ಆರೆಂಜ್ ಹಾಗೂ ರೆಡ್ ಲೈನ್ ಸೇರಿದಂತೆ ಒಟ್ಟು 191 ಮೆಟ್ರೋ ಸ್ಟೇಷನ್‌ಗಳಲ್ಲಿ ಈ ಸ್ವಯಂಚಾಲಿತ ಗೇಟ್‌ಗಳು ಬರಲಿವೆ.
ಈಗಾಗಲೇ ಬ್ಲೂ ಲೈನ್ ನ 2 ನಿಲ್ದಾಣಗಳು ಹಾಗೂ ಪಿಂಕ್ ಲೈನ್ ನ 12 ನಿಲ್ದಾಣಗಳು ಸೇರಿದಂತೆ ಒಟ್ಟು 14 ಪ್ರಮುಖ ಸ್ಟೇಷನ್‌ಗಳಿಗೆ ಪಿಎಸ್ಡಿ ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕೃತ ಅನುಮೋದನೆ ನೀಡಿವೆ. ಇನ್ನುಳಿದ 176 ಮೆಟ್ರೋ ನಿಲ್ದಾಣಗಳಿಗೆ ಈ ವ್ಯವಸ್ಥೆ ವಿಸ್ತರಿಸಲು ರಾಜ್ಯ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು, ಇದರ ಸವಿಸ್ತಾರ ಯೋಜನಾ ವರದಿಯನ್ನು (DPR) ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿದೆ. ಸದ್ಯದಲ್ಲೇ ಕೇಂದ್ರದಿಂದಲೂ ಇದಕ್ಕೆ ಮುದ್ರೆ ಬೀಳುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ತಿಳಿಸಿದ್ದಾರೆ.
ಯಾವ ಮಾರ್ಗದಲ್ಲಿ ಎಷ್ಟೆಷ್ಟು ಸ್ಟೇಷನ್‌ಗಳಿಗೆ ಪಿಎಸ್ಡಿ?
ಪ್ರಯಾಣಿಕರ ದಟ್ಟಣೆ ಹಾಗೂ ಸುರಕ್ಷತೆಯನ್ನು ಪರಿಗಣಿಸಿ ಹಂತಹಂತವಾಗಿ ಎಲ್ಲಾ ಮಾರ್ಗಗಳಲ್ಲೂ ಈ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಲು ಬಿಎಂಆರ್‌ಸಿಎಲ್ ಪ್ಲಾನ್ ಮಾಡಿದೆ. ಮಾರ್ಗಗಳ ವಿವರ ಹೀಗಿದೆ:
- ನೇರಳೆ ಮಾರ್ಗ (Purple Line): 37 ಸ್ಟೇಷನ್‌ಗಳು
- ಹಸಿರು ಮಾರ್ಗ (Green Line): 32 ಸ್ಟೇಷನ್‌ಗಳು
- ಆರೆಂಜ್ ಲೈನ್ (Orange Line): 31 ಸ್ಟೇಷನ್‌ಗಳು
- ಬ್ಲೂ ಲೈನ್ (Blue Line): 29 ಸ್ಟೇಷನ್‌ಗಳು
- ರೆಡ್ ಲೈನ್ (Red Line): 27 ಸ್ಟೇಷನ್‌ಗಳು
- ಗುಲಾಬಿ ಮಾರ್ಗ (Pink Line): 18 ಸ್ಟೇಷನ್‌ಗಳು
- ಹಳದಿ ಮಾರ್ಗ (Yellow Line): 16 ಸ್ಟೇಷನ್‌ಗಳು
ತಂತ್ರಜ್ಞಾನಕ್ಕೆ ಪ್ರಯಾಣಿಕರ ಹರ್ಷ
ದೆಹಲಿ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಪಿಎಸ್ಡಿ ಡೋರ್‌ಗಳನ್ನು ಕಡ್ಡಾಯವಾಗಿ ಬಳಸಲಾಗುತ್ತಿದೆ. ಆದರೆ ನಮ್ಮ ಮೆಟ್ರೋದಲ್ಲಿ ಸದ್ಯಕ್ಕೆ ಕೇವಲ ಸ್ಟೀಲ್ ಗೇಟ್ ಹಾಗೂ ಬ್ಯಾರಿಕೇಡ್‌ಗಳನ್ನಷ್ಟೇ ಭದ್ರತೆಗೆ ಬಳಸಲಾಗುತ್ತಿತ್ತು. ರೈಲು ಪ್ಲಾಟ್‌ಫಾರ್ಮ್‌ಗೆ ಬಂದು ನಿಂತಾಗ ಮಾತ್ರವೇ ಈ ಪಿಎಸ್ಡಿ ಬಾಗಿಲುಗಳು ತೆರೆದುಕೊಳ್ಳುವುದರಿಂದ, ಯಾರೂ ಕೂಡ ಟ್ರ್ಯಾಕ್‌ಗೆ ಇಳಿಯಲು ಅಥವಾ ಹಾರಲು ಸಾಧ್ಯವಾಗುವುದಿಲ್ಲ. ಬಿಎಂಆರ್‌ಸಿಎಲ್‌ನ ಈ ಹೊಸ ನಿರ್ಧಾರಕ್ಕೆ ಮೆಟ್ರೋ ನಿತ್ಯ ಪ್ರಯಾಣಿಕರಾದ ಗುರುರಾಜ್ ಹಾಗೂ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದು, ಇದರಿಂದ ಅನಾಹುತಗಳು ಸಂಪೂರ್ಣವಾಗಿ ತಪ್ಪಲಿವೆ ಎಂದು ಆಶಿಸಿದ್ದಾರೆ. ಕೇಂದ್ರ ಸರ್ಕಾರದ ಅಂತಿಮ ಅನುಮತಿ ಸಿಗುತ್ತಿದ್ದಂತೆಯೇ ಕಾಮಗಾರಿ ವೇಗ ಪಡೆದುಕೊಳ್ಳಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




