ಬೆಂಗಳೂರು, (ಫೆಬ್ರವರಿ 15): ನಮ್ಮ ಮೆಟ್ರೋ ದುಪ್ಪಟ್ಟು ದರ ಏರಿಕೆ ಮಾಡಿತ್ತು. ಜನಾಕ್ರೋಶ ಭುಗಿಲೆದ್ದ ಬಳಿಕ ಬಿಎಂಆರ್ಸಿಎಲ್ ಕೊಂಚ ಬೆಲೆ ಇಳಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು. ಆದ್ರೆ ಪ್ರಯಾಣಿಕರು ಮಾತ್ರ ಮೆಟ್ರೋದಿಂದ ಸ್ವಲ್ಪ ಸ್ವಲ್ಪವೇ ದೂರ ದೂರ ಉಳಿಯುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಹೌದು…ಮೆಟ್ರೋ ಪ್ರಯಾಣ ದುಬಾರಿಯಾಗಿದ್ದರಿಂದ ಜನರು ಆರ್ಥಿಕ ಲೆಕ್ಕಾಚಾರದೊಂದಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಬಿಎಂಟಿಸಿ ಬಸ್ನತ್ತ ಮುಖ ಮಾಡುತ್ತಿದ್ದರೆ, ಇನ್ನೂ ಕೆಲವರು ಸ್ವಂತ ವಾಹನಗಳಲ್ಲಿ ಓಡಾಡಲು ಶುರು ಮಾಡಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಾಣಿಕರಲ್ಲಿ ಕುಂಠಿತವಾಗಿದ್ದರೆ, ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗುತ್ತಿದೆ.
ಕಳೆದ ಸೋಮವಾರ 8 ಲಕ್ಷದ 28 ಸಾವಿರ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು. ಮಾರನೇ ದಿನ ಅಂದ್ರೆ ಮಂಗಳವಾರ ಈ ಸಂಖ್ಯೆ 7 ಲಕ್ಷದ 78 ಸಾವಿರಕ್ಕೆ ಇಳಿಕೆಯಾಯ್ತು. ಇನ್ನು ಬುಧವಾರ 7 ಲಕ್ಷದ 62 ಸಾವಿರ ಮಂದಿ ಮೆಟ್ರೋದಲ್ಲಿ ಓಡಾಡಿದ್ರೆ ಗುರುವಾರ 7 ಲಕ್ಷದ 51 ಮಂದಿ ಪ್ರಯಾಣ ಬೆಳೆಸಿದ್ದಾರೆ.
ಮೆಟ್ರೋದ ದರ ಏರಿಕೆಯ ಬಿಸಿ ಪ್ರಯಾಣಿಕರಿಗೆ ಮಾತ್ರವಲ್ಲ, ಟ್ರಾಫಿಕ್ಗೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಜನ ಮೆಟ್ರೋ ಹಾಗೂ ಖಾಸಗಿ ವಾಹನಗಳ ನಡುವಿನ ಖರ್ಚನ್ನು ತಾಳೆ ಹಾಕಿ ನೋಡುತ್ತಿದ್ದಾರೆ. ಹೀಗಾಗಿಯೇ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 1 ಕೋಟಿ 16 ಲಕ್ಷ ವಾಹನಗಳಿವೆ. ಸಿಟಿ ಮಂದಿ ಎಲ್ಲ ಖಾಸಗಿ ವಾಹನ ಬಳಸೋದಕ್ಕೆ ಶುರು ಮಾಡಿದ್ರೆ, ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳಲಿದೆ.
ದೇಶದಲ್ಲಿ ಬೇರೆ ಬೇರೆ ಮೆಟ್ರೋಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ತಾನು ಸೃಷ್ಟಿಸಿರುವ ಸ್ವತ್ತು ಮತ್ತು ರಿಯಲ್ ಎಸ್ಟೇಟ್ ಬಳಸಿಕೊಂಡು ಶುಲ್ಕೇತರ ಆದಾಯ ಗಳಿಸುವಲ್ಲಿ ಹಿಂದಿದೆ. ಹೀಗಾಗಿಯೇ ಮೆಟ್ರೋ ಪ್ರಯಾಣಿಕರ ಮೇಲೆ ಹೊರೆ ಹಾಕುತ್ತಿದೆ. ಹಣದುಬ್ಬರ, ಇಂಧನ ಹಾಗೂ ಕಾರ್ಯ ನಿರ್ವಹಣೆ ವೆಚ್ಚ ಅಧಿಕ ಆಗಿರುವುದು ದರ ಏರಿಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
2017ರ ಮಾರ್ಚ್ನಲ್ಲಿ 130.09 ಹಣದುಬ್ಬರವಿತ್ತು. ಈ ಅಂಕಿ 2024ಕ್ಕೆ 185ರಷ್ಟು ಹೆಚ್ಚಾಗಿದೆ. ಅಂದ್ರೆ ಶೇಕಾಡಾ 42ರಷ್ಟು ಏರಿಕೆ ಆಗಿದೆ. ಈ ಬದಲಾವಣೆ ನಿರ್ವಹಣೆ ವೆಚ್ಚದಲ್ಲಿ ಶೇಕಡಾ 6ರಷ್ಟು ಏರಿಕೆಯಾಗಿದೆ. ಇದರ ಪ್ರಕಾರ ಟಿಕೆಟ್ ವೆಚ್ಚ ಶೇಕಡಾ 25.58ರಷ್ಟು ಹೆಚ್ಚಿಸುವ ಅಗತ್ಯವಿದೆ. 2017ರಲ್ಲಿ ಮೆಟ್ರೋ ನಿರ್ವಹಣೆ ಹಾಗೂ ಆಡಳಿತಕ್ಕಾಗಿ 0.38ಕೋಟಿ ರೂಪಾಯಿ ವೆಚ್ಚ ಆಗ್ತಿತ್ತು. ಅಂದ್ರೆ ಶೇಕಡಾ 366 ವೆಚ್ಚ ಬದಲಾಗಿದೆ. ನಿರ್ವಹಣೆ ವೆಚ್ಚ ಶೇಕಡಾ 20ರಷ್ಟಿದ್ರೆ, ಶೇಕಡಾ 73.16ರಷ್ಟು ಟಿಕೆಟ್ ದರ ಹೆಚ್ಚಿಸುವ ಅಗತ್ಯ ನಿರ್ಮಾಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Sat, 15 February 25