ಬೆಂಗಳೂರು, ಫೆ.20: ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಮೆಟ್ರೋ ಪ್ರಯಾಣಿಕರಿಗೆ (Namma Metro) ಬೆಳ್ಳಂ ಬೆಳಗ್ಗೆ ಶಾಕ್ ಆಗಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆಂದ ಬಿಎಂಆರ್‌ಸಿಎಲ್ (BMRCL) ತಿಳಿಸಿದೆ.
ನಮ್ಮ ಮೆಟ್ರೋ ತಾಂತ್ರಿಕ ತೊಂದರೆ ಬಗ್ಗೆ ಎಕ್ಸ್ ಖಾತೆ ಮೂಲಕ ಟ್ವೀಟ್ ಮಾಡಿರುವ ಬಿಎಂಆರ್‌ಸಿಎಲ್, ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಇದರಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದ ಟ್ವೀಟ್ ಮಾಡಿದೆ.
The technical snag on the purple line is set right at 9.20 am and trains are moving at the schedules speeds . It takes some more time to normalise the cascading effects and to run as per schedule . Inconvenience caused is regretted.
— ನಮ್ಮ ಮೆಟ್ರೋ (@OfficialBMRCL) February 20, 2024
ಇದನ್ನೂ ಓದಿ: Karnataka Budget: ನಮ್ಮ ಮೆಟ್ರೋ: 2025ರ ಒಳಗೆ ಹೊಸದಾಗಿ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ
ನೇರಳೆ ಮಾರ್ಗದಲ್ಲಿ ಸುಮಾರು 45 ನಿಮಿಷದಿಂದ ಯಾವುದೇ ಮೆಟ್ರೋ ರೈಲುಗಳು ಸಂಚರಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿಯೇ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಭಾರೀ ಜನದಟ್ಟಣೆ ಉಂಟಾಗಿದ್ದು, ಎಲ್ಲ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ತಾಂತ್ರಿಕ ಸಮಸ್ಯೆಗೂ ಮುನ್ನ ಹಲವು ನಿಲ್ದಾಣಗಳಲ್ಲಿ ಮೆಟ್ರೋ ಹತ್ತಿದ್ದ ಪ್ರಯಾಣಿಕರನ್ನು ಇಳಿಯುವಂತೆ ಮನವಿ ಮಾಡಲಾಗುತ್ತಿದ್ದು, ಪರ್ಯಾಯ ಸಾರಿಗೆಯನ್ನು ಬಳಸುವಂತೆ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್ ಘೋಷಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿರುವುದರಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ಸ್ಟೇಷನ್ ಸೇರಿ ಎಲ್ಲ ನಿಲ್ದಾಣಗಳಲ್ಲಿಯೂ ಭಾರೀ ಜನದಟ್ಟಣೆ ಉಂಟಾಗಿದೆ. ತಡೆಗಾಗಿ ಕ್ಷಮಿಸಿ, ಆದಷ್ಟು ಬೇಗ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ. ದಯವಿಟ್ಟು ಮುಂದಿನ ಸೂಚನೆಗಾಗಿ ನಿರೀಕ್ಷಿಸಿ ಎಂದು ಮೆಟ್ರೋದ ಸೂಚನಾ ಸ್ಕ್ರೀನ್‌ಗಳಲ್ಲಿ ಸಂದೇಶವನ್ನು ಬಿಎಂಆರ್‌ಸಿಎಲ್ ಪ್ರದರ್ಶಿಸುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:27 am, Tue, 20 February 24