ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು (Bengaluru) ಜನರ ವೇಗದ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ (Namma Metro) ಅನುಕೂಲಕರವಾಗಿದೆ. ನಮ್ಮ ಮೆಟ್ರೋದಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಸಲು ಮುಂದಾಗಿದೆ. ಈ ಬಗ್ಗೆ ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಅವಧಿಯನ್ನು ಬಿಎಂಆರ್ಸಿಎಲ್ ವಿಸ್ತರಿಸಿದೆ.
ಟಿಕೆಟ್ ದರ ಏರಿಕೆ ಬಗ್ಗೆ ಅಭಿಪ್ರಾಯ ತಿಳಿಸಲು ಬಿಎಂಆರ್ಸಿಎಲ್ ಈ ಹಿಂದೆ ಅಕ್ಟೋಬರ್ 21ರವರೆಗೆ ಗಡುವು ನೀಡಿತ್ತು. ಬಿಎಂಆರ್ಸಿಎಲ್ ಗಡುವು ಅವಧಿಯನ್ನು ವಿಸ್ತರಿಸಿದ್ದು, ಸಾರ್ವಜನಿಕರಿಗೆ ಅಕ್ಟೋಬರ್ 28ರವರಗೆ ಸಮಯ ನೀಡಿದೆ.
ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ffc@bmrc.co.inಗೆ ಕಳುಹಿಸಬಹುದು. ಇಲ್ಲವೇ ಅಂಚೆ ಮೂಲಕ ಬಿಎಂಆರ್ಸಿಎಲ್ ಒಂದನೇ ಶುಲ್ಕ ನಿಗದಿ ಸಮಿತಿ ಅಧ್ಯಕ್ಷರಿಗೆ ಕಳುಹಿಸಬಹುದು. ಅಥವಾ ವಾಟ್ಸಾಪ್ ಸಂಖ್ಯೆ 9448291173ಗೂ ನಿಮ್ಮ ಸಲಹೆ ಕಳುಹಿಸಬಹುದಾಗಿದೆ ಎಂದು ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ನಾಗಸಂದ್ರ-ಮಾದಾವರ ಮೆಟ್ರೋ ಸಂಬಂಧ ಡಿಕೆಶಿ, ಕೇಂದ್ರ ಸಚಿವರಿಗೆ ತೇಜಸ್ವಿ ಸೂರ್ಯ ಪತ್ರ
ಕಳೆದ ಏಳು ವರ್ಷದಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿಲ್ಲ. ಇದೀಗ ಬಿಎಂಆರ್ಸಿಎಲ್ ಟಿಕೆಟ್ ದರ ಏರಿಸಲು ಮುಂದಾಗಿದೆ. ಟಿಕೆಟ್ ದರ ಏರಿಕೆ ಸಂಬಂಧ “ದಿ ಫೇರ್ ಪಿಕ್ಸೇಷನ್ ಕಮಿಟಿ” ರಚನೆಯಾಗಿದ್ದು, ಈ ಸ್ವತಂತ್ರ ಸಂಸ್ಥೆ ಎಷ್ಟು ರೂಪಾಯಿ ಏರಿಕೆ ಮಾಡಬೇಕೆಂದು ನಿರ್ಧರಿಸುತ್ತದೆ.
“ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದ್ದು, ಕಮಿಟಿಯು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಿದೆ. ಖರ್ಚು, ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ” ಎಂದು ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ.
ನಮ್ಮ ಮೆಟ್ರೋದ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ 60 ರೂ. ಆಗಿದೆ. ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಈಗ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Sun, 20 October 24