ಜ 23ರ ಒಳಗೆ ಒಕ್ಕಲಿಗರಿಗೆ ಮೀಸಲಾತಿ ಘೋಷಣೆಯಾಗದಿದ್ದರೆ ಹೋರಾಟದ ಕಿಚ್ಚು ಹೊತ್ತಿಸುತ್ತೇವೆ: ನಂಜಾವಧೂತ ಸ್ವಾಮೀಜಿ
ಸಮುದಾಯದ ಪರವಾಗಿ ದೇವೇಗೌಡ ಮತ್ತು ಎಸ್.ಎಂ.ಕೃಷ್ಣ ಅವರನ್ನು ಜ 23 ರಂದು ಗೌರವಿಸಲಾಗುವುದು. ಅಷ್ಟರೊಳಗೆ ನಮಗೆ ಮೀಸಲಾತಿ ಘೋಷಿಸಬೇಕು ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.
ಬೆಂಗಳೂರು: ಕರ್ನಾಟಕದಲ್ಲಿ ಒಕ್ಕಲಿಗ ಸಮಯದಾಯದ ಜನಸಂಖ್ಯಾ ಪ್ರಮಾಣ ಶೇ 19ರಿಂದ 20ರಷ್ಟು ಇದೆ. ಇಷ್ಟು ದೊಡ್ಡ ಸಮುದಾಯಕ್ಕೆ ಕೇವಲ ಶೇ 4ರಷ್ಟು ಮಾತ್ರವೇ ಮೀಸಲಾತಿ ಸಿಕ್ಕಿದೆ. ಸರ್ಕಾರಕ್ಕೆ ಇಂದು ಈ ಸಮಾವೇಶದ ಮೂಲಕ ನಮ್ಮ ಮನವಿ ಸಲ್ಲಿಸುತ್ತಿದ್ದೇವೆ. ನಮ್ಮ ಮನವಿಯನ್ನು ಸರ್ಕಾರದ ಪರವಾಗಿ ಸಚಿವರಾದ ಅಶೋಕ್, ಸುಧಾಕರ್, ಗೋಪಾಲಯ್ಯ ಪಡೆಯಲಿದ್ದಾರೆ. ಈ ಮನವಿಯನ್ನು ಸರ್ಕಾರ ಆದಷ್ಟೂ ಬೇಗ ಪರಿಗಣಿಸಬೇಕು ಎಂದು ಒಕ್ಕಲಿಗರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಲು ಬೆಂಗಳೂರಿನಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ಸಭೆಗೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರು ಬಂದಿಲ್ಲ ಎಂದು ನೀವು ಅಂದುಕೊಳ್ಳಬಹುದು. ಅವರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಮುದಾಯದ ಬೇಡಿಕೆ ಬಗ್ಗೆ ಕಾಳಜಿಯಿಂದ ಮಾತನಾಡಿದರು. ದೇವೇಗೌಡರ ಆರೋಗ್ಯ ಇತ್ತೀಚೆಗೆ ಸ್ವಲ್ಪ ಏರುಪೇರು ಆಗುತ್ತಿದೆ ಎಂದು ಹೇಳಿದರು.
ನಂಜಾವಧೂತ ಸ್ವಾಮೀಜಿ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೀರಿ. ನಮಗೂ ನಮ್ಮ ಹಕ್ಕು ಕೊಡಿ. ರಾಜ್ಯದ ಜನಸಂಖ್ಯೆಯಲ್ಲಿ ಶೇ 16ರಷ್ಟು ಇರುವ ನಮಗೆ ಶೇ 15 ರಷ್ಟು ಮೀಸಲಾತಿ ಕೊಡಿ. ನಗರ ಪ್ರದೇಶ, ಆರ್ಥಿಕ ಹಿಂದುಳಿದ ವರ್ಗ ಮೀಸಲಾತಿಯಡಿ ನಮಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಇಲ್ಲಿಯವರೆಗೂ ಸಹಿಸಿಕೊಂಡು ಬಂದಿದ್ದು ಸಾಕು. ಸಹನೆಯೇ ದೌರ್ಬಲ್ಯ ಎಂದು ತಿಳಿದುಕೊಂಡರೆ ಅದನ್ನು ಸಹಿಸಲು ಆಗುವುದಿಲ್ಲ. ಆದಷ್ಟು ಬೇಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂದರು.
ನಮ್ಮ ಸಮಾಜಕ್ಕೆ ದೇವೇಗೌಡರ ಹಾಗೂ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ. ಹೀಗಾಗಿ ಇವರಿಬ್ಬರನ್ನು ಗೌರವಿಸುವ ಯೋಚನೆ ಮಾಡಿದ್ದೇವೆ. ಸಮುದಾಯದ ಪರವಾಗಿ ಜನವರಿ 23 ರಂದು ಅವರಿಬ್ಬರನ್ನೂ ಗೌರವಿಸಲಾಗುವುದು. ಅಷ್ಟರೊಳಗೆ ನಮಗೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟದ ಕಿಚ್ಚು ಹೊತ್ತಿಸಬೇಕಾಗುತ್ತದೆ. ಈಗಂತೂ ಡಬಲ್ ಸರ್ಕಾರ ಇದೆ. ಮೊನ್ನೆ ಮೋದಿಯವರು ಬಂದು ಹೋಗಿದ್ದಾರೆ. ನಮ್ಮ ಎರಡು ಬೇಡಿಕೆಯಲ್ಲಿ ಒಂದು ಕೇಂದ್ರ ಸರ್ಕಾರ ಈಡೇರಿಸಬೇಕು, ಒಂದನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಸಭೆಯಲ್ಲಿ ಸಂಜಾವಧಾತ ಸ್ವಾಮೀಜಿ ನಿರ್ಣಯ ಮಂಡಿಸಿದರು.
ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಕೆಶಿ
ರಾಜ್ಯ ಒಕ್ಕಲಿಗರ ಸಂಘದ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ. ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತಿದೆ. ನಿಮ್ಮ ಶಕ್ತಿ ಉತ್ಸಾಹ ನೋಡಿದರೆ ಹಾಗೆ ಅನ್ನಿಸುತ್ತಿದೆ. ನಿಮ್ಮ ಮನೆಯ ಬಾಗಿಲಿಗೆ ಬಂದಿರುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಕೈಲಿ ಅಧಿಕಾರವಿಲ್ಲದಿದ್ದರೆ ಏನೂ ಮಾಡಲು ಆಗುವುದಿಲ್ಲ. ನನ್ನ ಕಷ್ಟ ಕಾಲದಲ್ಲಿ ಸಮುದಾಯ ಬೆನ್ನಿಗೆ ನಿಂತಿತ್ತು. ನಾನು ಜೈಲಿಗೆ ಹೋದಾಗಲೂ ನನ್ನ ಜತೆಗೆ ನಿಂತಿದ್ದಿರಿ. ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಮಾತಾಡಲು ಶಕ್ತಿ ನೀಡಿದ್ದೀರಿ. ನನ್ನ ಮೇಲೆ ಸಮುದಾಯದ ಋಣ ಇದೆ, ಆ ಋಣ ತೀರಿಸಬೇಕಿದೆ ಎಂದರು.
ವಿವಾದಕ್ಕೀಡಾದ ಜಯರಾಮ್ ಕೀಲಾರ ಮಾತು
ಮೈಸೂರಿನ ಒಕ್ಕಲಿಗ ಮುಖಂಡ ಜಯರಾಮ್ ಕೀಲಾರ ಅವರ ಮಾತು ಸಭೆಯಲ್ಲಿ ವಿವಾದ ಹುಟ್ಟುಹಾಕಿತು. ‘ಒಕ್ಕಲಿಗ ಸಮುದಾಯ ಬಿಜೆಪಿಗೆ ಇಡ್ಲಿ ಸಂಬಾರ್ ನೀಡಿದೆ, ಕಾಂಗ್ರೆಸ್‌ಗೆ ಅನ್ನ ಸಾಂಬಾರ್ ಕೊಟ್ಟಿದೆ, ದೇವೆಗೌಡರಿಗೆ ಹೊಳಿಗೆ ಊಟ ಹಾಕಿದೆ’ ಎಂದು ಅವರು ಹೇಳಿದರು. ಮೀಸಲಾತಿ ಕುರಿತು ಚರ್ಚಿಸಿದ್ದ ಸಭೆಯಲ್ಲಿ ರಾಜಕೀಯದ ಮಾತು ಬಂದಿದ್ದಕ್ಕೆ ಸಭಿಕರ ಆಕ್ಷೇಪಿಸಿದರು. ಇಲ್ಲಿ ರಾಜಕೀಯ ಮಾತು ಬೇಡ. ಮಾತು ನಿಲ್ಲಿಸಿ ಎಂದು ಅವರನ್ನ ಕಳುಹಿಸಲು ಪ್ರಯತ್ನ ಮಾಡಲಾಯಿತು. ಕೆಲ ಕಾಲ ಗೊಂದಲ ವಾತಾವರಣ ನೆಲೆಸಿತ್ತು. ‘ಮಾತನಾಡಲಿ ಬಿಡಿ’ ಸ್ವಾಮೀಜಿಗಳು ಹೆಳಿದ ನಂತರ ಜಯರಾಮ್ ಕೀಲಾರ ಮಾತು ಮುಂದುವರಿಸಿದರು.
Published On - 3:47 pm, Sun, 27 November 22