ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಕ್ಕಿಂತಲೂ ಸುಪ್ರೀಂ ನಮ್ಮ ಸಂವಿಧಾನ -ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್
ಬೆಂಗಳೂರಿನಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಭಾಗಿಯಾಗಿದ್ದರು.
ಬೆಂಗಳೂರು: ನಗರದ ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದಲ್ಲಿ ನವೆಂಬರ್ 26ರಂದು ಸಂವಿಧಾನ ದಿನಾಚರಣೆ(Constitution Day) ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್(HP Sandesh) ಭಾಗವಹಿಸಿದ್ದರು.
ಕಾನೂನು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತ, ಸದೃಡವಾದ ಶ್ರೇಷ್ಟ ಸಂವಿಧಾನ ನಮ್ಮ ಭಾರತ ಸಂವಿಧಾನ. ನಮ್ಮ ಸಂವಿಧಾನ ರಚನೆಯಲ್ಲಿ,ರಚನಾ ಸಮಿತಿ ಸದಸ್ಯರ ಪರಿಶ್ರಮ ಅನನ್ಯವಾದುದು. 389 ಸದಸ್ಯರಲ್ಲಿ ಬಹುಪಾಲು ಸದಸ್ಯರು ವಕೀಲರಾಗಿದ್ದವರು, ಅವರೆಲ್ಲಾ ತಮ್ಮ ವಕೀಲಿ ವೃತ್ತಿಯನ್ನು ಬದಿಗೊತ್ತಿ, 2 ವರ್ಷ 11 ತಿಂಗಳ ಕಾಲ ಸುಧೀರ್ಘವಾಗಿ ಸಂವಿಧಾನ ರಚನೆಗೆ ಕಾರ್ಯನಿರ್ವಹಿಸಿದ್ದಾರೆ. ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ನೇತೃತ್ವದ, ಅಧ್ಯಕ್ಷತೆಯ ಸಮಿತಿ ಸಂವಿಧಾನ ರಚನೆ ಮಾಡಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ನೂರಾರು ಜನ ಸಮರ್ಥ ಶ್ರೇಷ್ಟ ನಾಯಕರು ಕಲ್ಯಾಣ ರಾಷ್ಟದ ಅಭ್ಯುದಯಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ‘ಸಾಧ್ಯವೇ ಇಲ್ಲ’: ಪಾಕ್ ಬೆದರಿಕೆಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ಅನುರಾಗ್ ಠಾಕೂರ್
ರಾಜ್ಯಗಳನ್ನು ಒಂದುಗೂಡಿಸಿ ರಾಷ್ಟ್ರದ ಐಕ್ಯತೆ, ಸಮಗ್ರತೆಗೆ ಒತ್ತು ನೀಡಿದ್ದಾರೆ. ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಮೂಲಭೂತ ಹಕ್ಕುಗಳನ್ನು ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ, ಮೂಲಭೂ ಕರ್ತವ್ಯಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಅಷ್ಟೇ ಅವಶ್ಯಕವಾಗಿದೆ. ಇವೆಲ್ಲವನ್ನೂ ಗಮನಿಸಿದಾಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಸಂಕಷ್ಟಗಳಿಗೆ ಭಾಗಿಯಾಗುವ ಸಮರ್ಥ ನಾಯಕರನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಾಣುತ್ತಿದ್ದೇವು. ರಾಷ್ಟ್ರಕ್ಕೆ ಬೇಕಾಗಿರುವುದು ರಾಷ್ಟ್ರ ನಾಯಕರು ಎಂಬ ಚಿಂತನೆ ಉಳ್ಳವರು. ಆಡಳಿತ ಎಂಬುದು ಭಟ್ಟಂಗಿಗಳನ್ನು ಕೂರಿಸಿಕೊಂಡು ನಡೆಸುವ ಆಡಳಿತವಾಗಬಾರದು ಎಂದು ಭ್ರಷ್ಟಾಚಾರದ ವಿರುದ್ದ ಚಾಟಿ ಬೀಸಿದರು. ಕಾನೂನಿಗೆ ಅನುಗುಣವಾಗಿ ಶಾಸಕಾಂಗ ಮತ್ತು ಕಾರ್ಯಾಂಗವೂ,ನ್ಯಾಯಾಂಗದ ಜೊತೆ-ಜೊತೆಗೆ ಕಾರ್ಯನಿರ್ವಹಿಸಿದಾಗ ಮಾತ್ರ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ, ನಾಗರೀಕ ಸಮಾಜ ಕಟ್ಟುವಲ್ಲಿ ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಕ್ಕಳಿಗೆ ಪೋಷಕರು ಆಸ್ತಿ-ಪಾಸ್ತಿ, ಹಣ ಮಾಡುವ ಬದಲಾಗಿ ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿಸಬೇಕು, ಪ್ರತಿ ಮನೆ-ಮನೆಯಲ್ಲೂ ವಿದ್ಯಾಭ್ಯಾಸ ಪಡೆದುಕೊಳ್ತಿರುವ ಮಕ್ಕಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವಂತಾಗಬೇಕಿದೆ.
ಕಲ್ಯಾಣ ರಾಷ್ಟದ ಅಶೋತ್ತರಗಳ ಈಡೇರಿಕೆಗೆ ದೇಶದ ನಾಗರೀಕರ ಪಾತ್ರವೂ ಮಹತ್ವದ್ದಾಗಿದೆ. ಕೇವಲ ಹಣ ಸಂಪಾದನೆಯೊಂದೇ ಬದುಕಿನ ಧ್ಯೇಯವಾಗಬಾರದು, ದೇಶದ ಸರ್ವತೋಮುಖ ಅಭಿವೃದ್ದಿಗೆ, ಏಳಿಗೆಗೆ ನಮ್ಮ ಪಾತ್ರವೇನು ಎಂಬುದನ್ನು ಅರಿತು ಜೀವನ ನಡೆಸಬೇಕು. ಶ್ರೀಸಾಮಾನ್ಯನ ಸಂಕಷ್ಟಕ್ಕೆ ಮಿಡಿಯುವ ಮನಸ್ಸುಳ್ಳರಾಗಬೇಕು.ಈ ಮೂಲಕ ನಾವು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯತೆ ಇದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು. ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದ ಛೇರ್ಮನ್ ಲೋಕೇಶ್.ಬಿ.ಎನ್, ಮಾತನಾಡಿ ನಾನು ಕಾನೂನು ವಿದ್ಯಾರ್ಥಿಯಾಗಿ ಪದವಿ ಪಡೆದುಕೊಂಡೆ, 2006 ರಲ್ಲಿ ವಕೀಲಿ ವೃತ್ತಿ ತೊರೆದು ಜನಪರ ಕಾರ್ಯಚಟುಕೆಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ, ವಕೀಲಿ ವೃತ್ತಿಯಲ್ಲಿ ಕೇವಲ ಹಣಮಾಡುವ ಹವ್ಯಾಸವೊಂದಕ್ಕೆ ಜೋತುಬೀಳದೆ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡು ನಾನು ಕೆಲಸ ಮಾಡ್ತಿದ್ದೇನೆ. ಕಾನೂನು ವಿದ್ಯಾರ್ಥಿಗಳು ಸೇವಾಮನೋಭಾವ ರೂಢಿಸಿಕೊಂಡು ಸೇವಾ ವೃತ್ತಿಯಲ್ಲಿ ನೈಪುಣ್ಯತೆಗಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ರು. ಕಾರ್ಯಕ್ರಮದಲ್ಲಿ ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸುಧಾ.ಜಿ, ಸಹಾಯಕ ಪ್ರಾಧ್ಯಪಕರುಗಳಾದ ಡಾ.ಸಂಜೀವೆಗೌಡ.ಜಿ.ಎಸ್, ಡಾ.ಅರವಿಂದಾ.ಹೆಚ್.ಟಿ, ಡಾ.ಗಿರೀಶ್,ಪ್ರೊ.ಮನೋಹರ್.ಡಿ, ಲಕ್ಣ್ಮೀಶ್ ರಾವ್, ವಿಶ್ವಪ್ರಿಯಾ, ಯೋಗೆಂದ್ರ.ಎಸ್ ಉಪಸ್ಥಿತರಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:51 am, Sun, 27 November 22