ಒಂದೇ ಎಸೆತದಲ್ಲಿ 8 ರನ್ ನೀಡಿ ಪಂದ್ಯ ಸೋಲಿಸಿದ ಯುವ ವೇಗಿ
TNPL 2025: ತಮಿಳುನಾಡು ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ಸೇಲಂ ಸ್ಪಾರ್ಟನ್ಸ್ ತಂಡವು ರೋಚಕ ಜಯ ಸಾಧಿಸಿದೆ. ಅದು ಕೂಡ ಕೊನೆಯ ಓವರ್ನಲ್ಲಿ. ಆದರೆ ಇಡೀ ಪಂದ್ಯದ ಚಿತ್ರಣ ಬದಲಾಗಿದ್ದು 19ನೇ ಓವರ್ನಲ್ಲಿ. ಅಂದರೆ ನಿರ್ಣಾಯಕ ಹಂತದಲ್ಲಿ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆಯುವ ಮೂಲಕ ತಿರುಪ್ಪೂರ್ ತಮಿಳನ್ಸ್ ವೇಗಿ ತಂಡದ ಸೋಲಿಗೆ ಕಾರಣರಾದರು.

ಕ್ರಿಕೆಟ್‌ನಲ್ಲಿ ಒಂದು ಚೆಂಡು ಅಥವಾ ಒಂದು ಓವರ್ ಪಂದ್ಯದ ದಿಕ್ಕನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಜೂನ್ 13 ರಂದು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ 9ನೇ ಪಂದ್ಯ. ಈ ಪಂದ್ಯವನ್ನು ಸೇಲಂ ಸ್ಪಾರ್ಟನ್ಸ್ ತಂಡವು ಕೊನೆಯ ಓವರ್ನಲ್ಲಿ ಗೆದ್ದುಕೊಂಡಿತು. ಇದಕ್ಕೆ ಕಾರಣರಾಗಿದ್ದು ತಿರುಪ್ಪೂರ್ ತಮಿಳನ್ಸ್ ವೇಗಿ ಇಸಾಕಿಮುತ್ತು.
ಈ ಪಂದ್ಯದ 19ನೇ ಓವರ್ ಎಸೆದ ಇಸಾಕಿಮುತ್ತು ಒಂದೇ ಎಸೆತದಲ್ಲಿ 8 ರನ್ಗಳನ್ನು ಬಿಟ್ಟು ಕೊಟ್ಟಿದ್ದರು. ಅಷ್ಟೇ ಅಲ್ಲದೆ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ದೀರ್ಘ ಮತ್ತು ದುಬಾರಿ ಓವರ್ ಎಸೆದ ಅನಗತ್ಯ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. .
ಒಂದೇ ಎಸೆತದಲ್ಲಿ 8 ರನ್:
ಸೇಲಂನ ಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಿರುಪ್ಪೂರ್ ತಮಿಳನ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಸೇಲಂ ಸ್ಪಾರ್ಟನ್ಸ್ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್ಗಳು ಬೇಕಿದ್ದವು.
ಈ ವೇಳೆ ತಿರುಪ್ಪೂರ್ ತಮಿಳನ್ಸ್ ತಂಡದ ನಾಯಕ ಸಾಯಿ ಕಿಶೋರ್ 19ನೇ ಓವರ್ ಅನ್ನು ಇಸಾಕಿಮುತ್ತು ಅವರಿಗೆ ನೀಡಿದರು. ಅತ್ತ ಕ್ರೀಸ್ನಲ್ಲಿದ್ದ ಸೇಲಂ ಸ್ಪಾರ್ಟನ್ಸ್ ಬ್ಯಾಟರ್ಗಳಾದ ಭೂಪತಿ ಕುಮಾರ್ ಮತ್ತು ಹರೀಶ್ ಕುಮಾರ್ ಒಟ್ಟಾಗಿ ಬಲಗೈ ವೇಗಿಯ ಮೊದಲ 5 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 17 ರನ್ ಗಳಿಸಿದರು.
ಇದಾಗ್ಯೂ ಕೊನೆಯ 7 ಎಸೆತಗಳಲ್ಲಿ ಸೇಲಂ ಸ್ಪಾರ್ಟನ್ಸ್ ತಂಡಕ್ಕೆ 14 ರನ್ಗಳು ಬೇಕಿದ್ದವು. ಆದರೆ ಇಸಾಕಿಮುತ್ತು 19ನೇ ಓವರ್ನ ಕೊನೆಯ ಎಸೆತವನ್ನು ಮುಗಿಸಲು ಪರದಾಡಿದರು. ಪರಿಣಾಮ 4 ನೋಬಾಲ್ಗಳು ಮೂಡಿಬಂದವು. ಈ ಅವಕಾಶವನ್ನು ಬಳಸಿಕೊಂಡ ಸೇಲಂ ಬ್ಯಾಟರ್ಗಳು ಒಟ್ಟು 8 ರನ್ಗಳಿಸಲು ಯಶಸ್ವಿಯಾದರು.
Was it brilliance or a breakdown? 🎭
31 needed off 12, and Tirupur pulled it off — with a little help from Salem at the death.#TNPL2025 pic.twitter.com/Bc54BEHaYr
— FanCode (@FanCode) June 13, 2025
11 ಎಸೆತಗಳು:
19ನೇ ಓವರ್ನಲ್ಲಿ ಇಸಾಕಿಮುತ್ತು ಎಸೆದದ್ದು ಬರೋಬ್ಬರಿ 11 ಎಸೆತಗಳನ್ನು ಎಸೆದರು. ಅಲ್ಲದೆ 4 ಓವರ್ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೇ 53 ರನ್ಗಳನ್ನು ಬಿಟ್ಟುಕೊಟ್ಟರು.
ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್
6 ರನ್ಗಳ ಗುರಿ:
ಇಸಾಕಿಮುತ್ತು 19ನೇ ಓವರ್ನಲ್ಲಿ 25 ರನ್ ನೀಡಿದ್ದ ಪರಿಣಾಮ ಸೇಲಂ ಸ್ಪಾರ್ಟನ್ಸ್ ತಂಡ ಕೊನೆಯ ಓವರ್ನಲ್ಲಿ ಕೇವಲ 6 ರನ್ಗಳ ಗುರಿ ಪಡೆಯಿತು. ಸುಲಭ ಗುರಿಯನ್ನು ಬೆನ್ನತ್ತಿದ ಸೇಲಂ ಸ್ಪಾರ್ಟನ್ಸ್ 19.5 ಓವರ್ಗಳಲ್ಲಿ 178 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
