‘ಸಾಧ್ಯವೇ ಇಲ್ಲ’: ಪಾಕ್ ಬೆದರಿಕೆಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ ಅನುರಾಗ್ ಠಾಕೂರ್
Anurag Thakur: ಸರಿಯಾದ ಸಮಯಕ್ಕಾಗಿ ಕಾಯಿರಿ. ಭಾರತ ಕ್ರೀಡಾ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿದ್ದು, ಯಾವುದೇ ದೇಶವು ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅನುರಾಗ್ ಠಾಕೂರ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಬಿಸಿಸಿಐ (BCCI) ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ (Pakistan Cricket Board) ನಡುವಿನ ವಾಕ್ಸಮರ ಇಲ್ಲಿಗೆ ನಿಲ್ಲುವ ಮುನ್ಸುಚನೆಗಳು ಕಾಣುತ್ತಿಲ್ಲ. ಈಗಾಗಲೇ ಹದಗೆಟ್ಟ ರಾಜಕೀಯ ಪರಿಸ್ಥಿತಿಗಳಿಂದ ಭಾರತ- ಪಾಕ್ ನಡುವಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ವರ್ಷಗಳೇ ಕಳೆದಿವೆ. ಕ್ರಿಕೆಟ್ ಮೂಲಕ ಈ ಎರಡೂ ದೇಶಗಳು ಪರಸ್ಪರ ಎದುರುಬದುರಾಗುತ್ತಿದ್ದವು. ಆದರೆ ಈಗ ಕ್ರಿಕೆಟ್ ಸಂಬಂಧಕ್ಕೂ ತೀಲಾಂಜಲಿ ಇಡುವ ಕಾಲ ಸನಿಹವಾದ್ದಂತೆ ತೋರುತ್ತಿದೆ. ಅದರಲ್ಲೂ ಪಾಕ್ ಮಂಡಳಿ ಅಧ್ಯಕ್ಷರ ಹೇಳಿಕೆಯ ನಂತರ ಈ ಚರ್ಚೆ ಹೊಸ ತಿರುವು ಪಡೆದುಕೊಂಡಿದೆ. ವಾಸ್ತವವಾಗಿ, ನಿನ್ನೆ ಅಂದರೆ ನ.26 ರಂದು ಪಾಕ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ (Rameez Raja), ಏಷ್ಯಾಕಪ್ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಮ್ಮ ತಂಡವೂ ಕೂಡ ಮುಂದಿನ ವರ್ಷ ಭಾರತದಲ್ಲಿ ನಡೆಯಲ್ಲಿರುವ ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈಗ ಪಾಕ್ ಅಧ್ಯಕ್ಷರ ಹೇಳಿಕೆಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ( Anurag Thakur) ತಕ್ಕ ಉತ್ತರ ನೀಡಿದ್ದಾರೆ.
ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ. ಹೀಗಾಗಿ ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ನಡೆಸಬೇಕಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಇದಾದ ನಂತರ ಪಿಸಿಬಿ ಬಿಸಿಸಿಐಗೆ ಬೆದರಿಕೆ ಹಾಕಲು ಯತ್ನಿಸಿದ್ದು, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, ಪಾಕ್ ತಂಡ ಕೂಡ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದೆ.
ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ
ಅಲ್ಲದೆ ಪಾಕಿಸ್ತಾನ ತಂಡ ವಿಶ್ವಕಪ್ ಆಡಲು ಭಾರತಕ್ಕೆ ಹೋಗದಿದ್ದರೆ, ಯಾರೂ ಪಂದ್ಯಾವಳಿಯನ್ನು ವೀಕ್ಷಿಸುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ಹೇಳಿಕೊಂಡಿದ್ದರು. ಪಿಸಿಬಿಯ ಈ ಪೊಳ್ಳು ಬೆದರಿಕೆಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಕ್ಕ ಉತ್ತರ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್, ಸರಿಯಾದ ಸಮಯಕ್ಕಾಗಿ ಕಾಯಿರಿ. ಭಾರತ ಕ್ರೀಡಾ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿದ್ದು, ಯಾವುದೇ ದೇಶವು ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಅಕ್ಟೋಬರ್‌ನಲ್ಲಿ ಈ ವಿವಾದ ಆರಂಭವಾದಾಗಲೂ ಅನುರಾಗ್ ಠಾಕೂರ್ ಪಿಸಿಬಿಯ ಬೆದರಿಕೆಗೆ ಇದೇ ರೀತಿ ಪ್ರತಿಕ್ರಿಯಿಸಿದ್ದರು.
ರಮೀಜ್ ರಾಜಾ ಹೇಳಿದ್ದೇನು?
ಇತ್ತೀಚಿಗೆ ಪಾಕಿಸ್ತಾನದ ಮಾಧ್ಯಮವೊಂದರ ಜೊತೆ ಮಾತನಾಡುತ್ತಿದ್ದ ರಮೀಜ್ ರಾಜಾ, ಮುಂದಿನ ವರ್ಷ ಏಷ್ಯಾಕಪ್‌ಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಬರದಿದ್ದರೆ, ವಿಶ್ವಕಪ್‌ಗೆ ಭಾರತಕ್ಕೆ ಪಾಕ್ ತಂಡವನ್ನು ಕಳುಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಪಾಕಿಸ್ತಾನದ ಮಂಡಳಿಯು ಈ ವಿಷಯದ ಬಗ್ಗೆ ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಪಾಕಿಸ್ತಾನ ತಂಡ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡದಿದ್ದರೆ, ಯಾರೂ ಕೂಡ ಪಂದ್ಯಾವಳಿಯನ್ನು ವೀಕ್ಷಿಸುವುದಿಲ್ಲ ಎಂದು ಅವರು ಹೇಳಿದರು. ಪ್ರಾಸಂಗಿಕವಾಗಿ, ಟಿ20 ವಿಶ್ವಕಪ್‌ನಂತೆ, ಮುಂದಿನ ವರ್ಷ ನಡೆಯಲ್ಲಿರುವ ಏಕದಿನ ವಿಶ್ವಕಪ್‌ನಲ್ಲೂ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
Published On - 10:37 am, Sun, 27 November 22