ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ

ಮಂಗನ ಕಾಯಿಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ಮತ್ತೊಂದು ಲ್ಯಾಬ್ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಶಿವಮೊಗ್ಗದಲ್ಲಿರುವ ಹಾಲಿ ಲ್ಯಾಬ್​​ ಜೊತೆಗೆ ಮತ್ತೊಂದು ಪರೀಕ್ಷಾ ಕೇಂದ್ರ ಆರಂಭವಾದಲ್ಲಿ ಮಂಗನ ಕಾಯಿಲೆ ಗುರುತಿಸುವಿಕೆ ಮತ್ತು ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಇದು ಸಹಕಾರಿಯಾಗಲಿದೆ. ಕರ್ನಾಟಕದಲ್ಲಿ ಇದುವರೆಗೆ 13 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​​ ತಿಳಿಸಿದ್ದಾರೆ.

ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ
ಮಂಗನ ಕಾಯಿಲೆ
Edited By:

Updated on: Dec 24, 2025 | 7:45 PM

ಬೆಂಗಳೂರು, ಡಿಸೆಂಬರ್​​ 24: ಮಂಗನ ಕಾಯಿಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ಶೀಘ್ರದಲ್ಲೇ ಮತ್ತೊಂದು KFD ಪರೀಕ್ಷಾ ಲ್ಯಾಬ್ ತೆರೆಯಲು ನಿರ್ಧರಿಸಲಾಗಿದೆ. ಶಿವಮೊಗ್ಗದಲ್ಲಿ ಒಂದು ಲ್ಯಾಬ್ ಕಾರ್ಯಾಚರಣೆ ಚಾಲ್ತಿಯಲ್ಲಿರುವ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರ ತೆರೆಯಲು ತಯಾರಿ ನಡೆದಿದೆ. ಮಂಗನ ಕಾಯಿಲೆಯನ್ನು ಗುರುತಿಸಲು ಹಾಗೂ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

13 ಜನರಲ್ಲಿ ಮಂಗನ ಕಾಯಿಲೆ ಪತ್ತೆ

ಪ್ರತಿವರ್ಷವೂ ಅಕ್ಟೋಬರ್​​ನಿಂದ ಜೂನ್​ವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಂಗನ ಕಾಯಿಲೆ ಪ್ರಕರಣಗಳು ಕಂಡುಬರುತ್ತವೆ. ಈ ಹಿನ್ನಲೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಹಲವು ಟೆಸ್ಟ್​ಗಳನ್ನು ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 1,163, ಚಿಕ್ಕಮಗಳೂರು 124, ಉಡುಪಿಯಲ್ಲಿ 12 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 368 ಜನರಿಗೆ ಪರೀಕ್ಷೆ ನಡೆದಿದೆ. ಈ ಪೈಕಿ 13 ಜನರಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ; ಕಾಡಿನಂಚಿನ ಜನರಲ್ಲಿ ಆತಂಕ

ಕಳೆದ ವರ್ಷ ಮಂಗನ ಕಾಯಿಲೆಯಿಂದ ಸುಮಾರು 8 ಜನ ಸಾವನ್ನಪ್ಪಿದ್ದರು. ಹೀಗಾಗಿ ಈ ವರ್ಷ ಮುಂಜಾಗೃತೆ ವಹಿಸಿದ್ದೇವೆ. ಇದರಿಂದ ಒಬ್ಬರೂ ಮೃತಪಡಬಾರದು ಎಂಬುದು ನಮ್ಮ ಉದ್ದೇಶವಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವ ದಿನೇಶ್​​ ಗುಂಡೂರಾವ್​​ ತಿಳಿಸಿದ್ದಾರೆ. ಇದುವರೆಗೆ ಸತ್ತ 87 ಮಂಗಗಳ ಪರೀಕ್ಷೆ ನಡೆಸಲಾಗಿದ್ದು, ಆ ಪೈಕಿ ಯಾವುದರಲ್ಲೂ ಕಾಯಿಲೆ ಪಾಸಿಟಿವ್​​ ಬಂದಿಲ್ಲ. ಅಕ್ಟೋಬರ್, ನವೆಂಬರ್, ಡಿಸೆಂಬರ್​​ನಲ್ಲಿಯವರೆಗೆ ಯಾರೊಬ್ಬರ ಸಾವು ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಯೇ 12 ಜನರಲ್ಲಿ ಈ ರೋಗ ಕಂಡುಬಂದಿದೆ. ಆ ಪೈಕಿ ಒಂದೇ ಗ್ರಾಮದ 10 ಜನರಿಗೆ ಮಂಗನ ಕಾಯಿಲೆ ವಕ್ಕರಿಸಿರೋದು ಗೊತ್ತಾಗಿದೆ. ಉಳಿದಂತೆ ಚಿಕ್ಕಮಗಳೂರಿನ ಒಬ್ಬರಲ್ಲಿ ಕಾಯಿಲೆ ಪತ್ತೆಯಾಗಿದೆ. ಈ ರೋಗದಿಂದ ಬಳಲುತ್ತಿರುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತೆ. ವ್ಯಾಕ್ಸಿನ್ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದು, ಹೊಸ ವ್ಯಾಕ್ಸಿನ್​​ನ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಮುಂದಿನ ವರ್ಷದ ಒಳಗೆ ಅದು ಬಳಕೆಗೆ ಲಭ್ಯ ಆಗಬಹುದು ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.