
ಬೆಂಗಳೂರು, ಡಿಸೆಂಬರ್ 26: ಹೊಸ ವರ್ಷವನ್ನು (New Year) ಭರ್ಜರಿಯಾಗಿ ವೆಲ್ಕಂ ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಕುಣಿದು ಕುಪ್ಪಳಿಸಲು ಯುವ ಸಮೂಹ ಸಜ್ಜಾಗಿದೆ. ಇತ್ತ ಪೊಲೀಸರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ (Seemanth Kumar) ನೇತೃತ್ವದಲ್ಲಿ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರ ಜೊತೆ ಸಭೆ ನಡೆಯಿತು. ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ ಮತ್ತು ಹೆಣ್ಮಕ್ಕಳ ಸುರಕ್ಷತೆ ಸೇರಿದಂತೆ 30 ಸೂಚನೆಗಳನ್ನು ಕೊಟ್ಟಿದ್ದಾರೆ. ಇನ್ನು ಬಾರ್ ಮತ್ತು ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಈಗಾಗಲೇ ಉಪವಿಭಾಗ, ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರನ್ನು ಕರೆಸಿ ಮೀಟಿಂಗ್ ಮಾಡಲಾಗಿದೆ. ಜನದಟ್ಟಣೆ ನಿಯಂತ್ರಣ, ವಯೋಮಿತಿ, ಸಮಯ, ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ, ಹೆಣ್ಮಕ್ಕಳ ಸುರಕ್ಷತೆ, ಎಂಟ್ರಿ, ಎಕ್ಸಿಟ್, ಫೈರ್ ಸೇಫ್ಟಿ, ಪಾರ್ಕಿಂಗ್ ಮತ್ತು ಮ್ಯಾನೇಜರ್, ಸಿಬ್ಬಂದಿ ಮದ್ಯಪಾನ ಮಾಡಿರಬಾರದು ಎಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: ನ್ಯೂ ಇಯರ್ ಹೆಸರಲ್ಲಿ ರೇವ್ ಪಾರ್ಟಿ ಮಾಡಿದ್ರೆ ಹುಷಾರ್! ಬೆಂಗಳೂರಿನಾದ್ಯಂತ ಖಾಕಿ ಸರ್ಪಗಾವಲು
ಎಮರ್ಜೆನ್ಸಿ ಕಾಂಟ್ಯಾಕ್ಟ್, ರೇವ್ ಪಾರ್ಟಿ, ಕಾನೂನುಬಾಹಿರ ಪಾರ್ಟಿ ಬಗ್ಗೆ ಪ್ರದರ್ಶನ ಮಾಡಬಾರದು. ಫೈರ್ ಕ್ರಾಕರ್ಸ್, ಆಯುಧಗಳು ಇರಬಾರದು. ಹೋಗಿ ಬರುವ ಜನರಿಗೆ ಸರದಿ ಸಾಲು ಇರಬೇಕು. ಹೀಗೆ ಎಲ್ಲದರ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಚೋದನಕಾರಿ ಹಾಡುಗಳನ್ನು ಹಾಕಬಾರದು. ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಬೇರೆ ವ್ಯವಸ್ಥೆ ಇರಬೇಕು. ಲಿಕ್ಕರ್ ಸ್ಟಾಕ್ ಬಗ್ಗೆ ಎಲ್ಲಾ ನೀಟಾಗಿ ಇರಬೇಕು. ಕಾರ್ಯಕ್ರಮದ ಪ್ಲ್ಯಾನ್ ಬಗ್ಗೆ ಪೊಲೀಸರಿಗೆ ತಿಳಿಸಬೇಕು. ಬಾರ್, ಪಬ್ನವರು ಹೆಚ್ಚುವರಿ ಸಮಯ ಕೇಳಿದ್ದರು, ಆದರೆ ರಾತ್ರಿ 1 ಗಂಟೆಗೆ ಬಂದ್ ಆಗಬೇಕೆಂದು ಸೂಚಿಸಿದ್ದೇನೆ. ಜವಾಬ್ದಾರಿಯಿಂದ ಹೊಸ ವರ್ಷಾಚರಣೆ ಮಾಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸೂಚನೆ ನಿಡಿದ್ದಾರೆ.
ವರದಿ: ವಿಕಾಸ್ ಟಿವಿ9 ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:20 pm, Fri, 26 December 25