ಬೆಂಗಳೂರು: ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಸಂಘಟನೆಯ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (National Investigation Agency – NIA) ಸಂಸ್ಥೆಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಶಂಕಿತನನ್ನು ಜುಹೇಬ್ ಶಕೀಲ್ ಎಂದು ಗುರುತಿಸಲಾಗಿದೆ. ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಶಕೀಲ್, ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಐಸಿಸ್, ಐಎಸ್ಐಎಲ್ ಜೊತೆಗೆ ಸಂಪರ್ಕ ಹೊಂದಿದ್ದ. ಕಳೆದ ಒಂದು ವರ್ಷದಿಂದ ಇವನನ್ನು ಎನ್ಐಎ ಹುಡುಕುತ್ತಿತ್ತು. ಮುಸ್ಲಿಂ ಯುವಕರನ್ನ ಸೆಳೆದು ಐಸಿಸ್ ಸಂಘಟನೆಗೆ ಸೇರಿಸುತ್ತಿದ್ದ ಎಂದು ಎನ್ಐಎ ಅನುಮಾನಿಸಿದೆ.
ಮುಸ್ಲಿಂ ಯುವಕರನ್ನು ಐಸಿಸ್ನತ್ತ ಆಕರ್ಷಿಸುವುದರೊಂದಿಗೆ ಹಣಕಾಸು ಸಂಗ್ರಹಿಸಿಕೊಡಲೂ ಪ್ರಯತ್ನಿಸುತ್ತಿದ್ದ. ತಿಲಕ್ ನಗರ ಮೂಲದ 32ರ ಹರೆಯದ ಶಕೀಲ್ ಕಂಪ್ಯೂಟರ್ ಅಪ್ಲಿಕೇಶನ್ ಪರಿಣಿತನೂ ಹೌದು. ಸೆಪ್ಟೆಂಬರ್ 2020ರಲ್ಲಿ ಮೊಹಮದ್ ತೌಖಿರ್ ಮೊಹ್ಮೂದ್, ಇರ್ಫಾನ್ ನಾಸೀರ್, ಶಿಹಾಬ್ ಮತ್ತು ಝುಹಾಬ್ ಹಮೀದ್ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿಕೊಂಡಿತ್ತು.
ಐಸಿಸ್ ಚಟುವಟಿಕೆಗಳಿಗೆ ಹಣ ಸಂಗ್ರಹಣೆಗಾಗಿ ಝುಹಾಬ್ ಮತ್ತು ತೌಖಿರ್ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಪತ್ತೆಯಾಗಿತ್ತು. ಕುರಾನ್ ಅಧ್ಯಯನ ಗುಂಪುಗಳ ಮೂಲಕ ಯುವಕರಲ್ಲಿ ಮೂಲಭೂತವಾದದ ವಿಚಾರಗಳನ್ನು ಬಿತ್ತಿ ಐಸಿಸ್ ವಿಚಾರಧಾರೆ ಬಿತ್ತುತ್ತಿದ್ದರು. ಟರ್ಕಿ ಮೂಲಕ ಸಿರಿಯಾಗೆ ಕಳಿಸಿ ಐಸಿಸ್ ಸಂಘಟನೆಯ ತೊಡಗಿಸುತ್ತಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
2013-14ರ ಅವಧಿಯಲ್ಲಿ ಬೆಂಗಳೂರಿನಿಂದ ಹಲವು ಯುವಕರನ್ನು ಸಿರಿಯಾಗೆ ಕಳಿಸಿ ಐಸಿಸ್ ಚಟುವಟಿಕೆಗಳಲ್ಲಿ ತೊಡಗಿಸಿದ ಆರೋಪದ ಮೇಲೆ ತೌಖಿರ್ನನ್ನು ಅಕ್ಟೋಬರ್ 23ರಂದು ಬಂಧಿಸಲಾಗಿತ್ತು. ಈತ ಸೌದಿ ಅರೇಬಿಯಾದಲ್ಲಿ ದಂತವೈದ್ಯನಾಗಿದ್ದ. ಸೌದಿಯಿಂದ ಬಂದಿದ್ದ ತೌಖಿರ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಐಸಿಸ್ ಉಗ್ರರೊಂದಿಗೆ ಸಂಬಂಧ ಹೊಂದಿದ್ದ ಆರೋಪ: ಶಂಕಿತನ ಬಂಧಿಸಿದ ಎನ್ಐಎ
ಇದನ್ನೂ ಓದಿ: ಆರೇ ತಿಂಗಳಲ್ಲಿ ಐಸಿಸ್ ಸಂಘಟನೆ ಅಮೆರಿಕ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಲಿದೆ: ಅಮೆರಿಕ ಗುಪ್ತಚರರಿಂದ ಎಚ್ಚರಿಕೆ