ಜೈಲಲ್ಲಿದ್ದ ಉಗ್ರನಿಗೆ ಹಣ, ಮೊಬೈಲ್, ವಾಕಿಟಾಕಿ ಕೊಡ್ತಿದ್ದ ಪೊಲೀಸ್-ಮನೋವೈದ್ಯ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ

ಜೈಲಿನಲ್ಲಿ ಲಷ್ಕರ್ ಉಗ್ರನಿಗೆ ನೆರವು ನೀಡಿದ್ದ ಮೂವರು ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ಮನೋವೈದ್ಯ ಹಾಗೂ ಕಾನ್ಸ್​​ಟೇಬಲ್ ಕೃತ್ಯಗಳನ್ನು ಬೆಳಕಿಗೆ ತಂದಿದ್ದಾರೆ. ಆರೋಪಿಗಳು ಉಗ್ರನಿಗೆ ನೆರವು ನೀಡಿದ್ದು, ಪ್ರಾಥಮಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಲ್ಲಿದ್ದ ಉಗ್ರನಿಗೆ ಹಣ, ಮೊಬೈಲ್, ವಾಕಿಟಾಕಿ ಕೊಡ್ತಿದ್ದ ಪೊಲೀಸ್-ಮನೋವೈದ್ಯ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ
ಕಾನ್ಸ್​ಟೇಬಲ್ ಚಾನ್ ಪಾಷಾ, ಅನೀಸ್ ಫಾತಿಮಾ (ಸಂಗ್ರಹ ಚಿತ್ರ)
Edited By:

Updated on: Jan 03, 2026 | 11:03 AM

ಬೆಂಗಳೂರು, ಜನವರಿ 3: ಅದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ. ಸಜಾಬಂಧಿ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ (Parappana Agrahara Jail) ಲಷ್ಕರ್ ಎ ತೊಯ್ಬಾ ಉಗ್ರ ಟಿ‌. ನಸೀರ್​​ಗೆ ನೆರವು ನೀಡಿದ್ದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಓರ್ವ ಎಎಸ್ಐ, ಜೈಲಿನ ಮನೋವೈದ್ಯ ಭಾಗಿಯಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಪ್ರಕರಣದ ತನಿಖೆ ಕೈಗೊಂಡ ಎನ್ಐಎ (NIA) ಅಧಿಕಾರಿಗಳು ಮೂವರು ಆರೋಪಿಗಳ ವಿರುದ್ದ ಎನ್ಐಎ ಸ್ಪೆಷಲ್‌ ಕೋರ್ಟ್​​ಗೆ ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ.

ಜೈಲಿನಲ್ಲಿದ್ದ ಉಗ್ರನಿಗಾಗಿ ಸಿದ್ಧವಾಗ್ತಿತ್ತು ಹ್ಯಾಂಡ್ ಗ್ರೆನೇಡ್!

ಉಗ್ರನಿಗೆ ನೆರವು ನೀಡಿದ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಸಿಎಆರ್ ಕಾನ್ಸ್​ಟೇಬಲ್ ಚಾನ್ ಪಾಷಾ, ಜೈಲಿನ ಮನೋವೈದ್ಯ ನಾಗರಾಜ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತೀಮಾಳನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ವೇಳೆ, ಮೂವರು ಆರೋಪಿಗಳ‌ ಸಂಚು ಹಾಗೂ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರಮುಖವಾಗಿ ಆರೋಪಿ ಅನೀಸ್ ಫಾತಿಮಾ, ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ತಾಯಿಯಾಗಿದ್ದು, ಎಲ್ಇಟಿ ಉಗ್ರ ಟಿ. ನಸೀರ್​​ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದಳು. ಮಗನ‌ ಸೂಚನೆಯಂತೆ ಹ್ಯಾಂಡ್ ಗ್ರೆನೇಡ್, ವಾಕಿಟಾಕಿ ವ್ಯವಸ್ಥೆ ಮಾಡಿ ಆರೋಪಿಗಳ ನಡುವೆ ಸಂವಹನಕ್ಕೆ ದಾರಿಯಾಗಿದ್ದಳು ಎಂಬುದು ಗೊತ್ತಾಗಿದೆ.

ಅದೇ ರೀತಿ ಸಿಎಆರ್ ಎಎಸ್ಐ ಆಗಿದ್ದ ಆರೋಪಿ ಚಾನ್ ಪಾಷಾ ಉಗ್ರ ಟಿ. ನಸೀರ್​​​ನ ಮಾಹಿತಿಯನ್ನು ಹೊರಗಡೆಗೆ ರವಾನಿಸುತ್ತಿದ್ದ ಎನ್ನಲಾಗಿದೆ. ನಸೀರ್​​ಗೆ ಒದಗಿಸುವ ಬೆಂಗಾವಲು ಪಡೆ ವಿವರಗಳನ್ನು ಹಣದಾಸೆಗಾಗಿ ಸಲ್ಮಾನ್ ಖಾನ್ ಎಂಬಾತನಿಗೆ ನೀಡುತ್ತಿದ್ದ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿದ್ದ ಡಾ. ನಾಗರಾಜ್, ಕಾನೂನು ಬಾಹಿರವಾಗಿ ಜೈಲಿಗೆ ಮೊಬೈಲ್ ಫೋನ್​ಗಳ‌ ಸಾಗಾಟ ಮಾಡುತ್ತಿದ್ದ. ಖೈದಿಗಳಿಂದ ಹಣ ಪಡೆದು ಮೊಬೈಲ್ ಮಾರಾಟ ಮಾಡುತ್ತಿದ್ದ. ಅದೇ ರೀತಿ ಟಿ. ನಸೀರ್​ಗೂ ಕೂಡ ಮೊಬೈಲ್ ಮಾರಾಟ ಮಾಡಿದ್ದು, ಇದೇ ಮೊಬೈಲ್ ಮೂಲಕ ನಸೀರ್ ಭಯೋತ್ಪಾದನಾ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಿದ ಎನ್ಐಎ ತಂಡ ಮೂವರು ಆರೋಪಿಗಳ ವಿರುದ್ದ ಎನ್ಐಎ ಸ್ಪೆಷಲ್‌ ಕೋರ್ಟ್​​ಗೆ ಹೆಚ್ಚುವರಿ ಚಾರ್ಜ್​​ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಾನ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾರನ್ನು 2025ರ ಜುಲೈ 8ರ ರಾತ್ರಿ ಎನ್​ಐಎ ಅಧಿಕಾರಿಗಳು ಬಂಧಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ