ಎನ್ಐಎ ಅಧಿಕಾರಿಗಳು (ಸಂಗ್ರಹ ಚಿತ್ರ)
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಎಸ್ಡಿಪಿಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ದಾಳಿ ನಡೆಸುವ ಮೊದಲು ರಾಷ್ಟ್ರೀಯ ತನಿಖಾ ದಳದ (National Investigation Agency – NIA) ಅಧಿಕಾರಿಗಳು ಸುಮಾರು 3 ತಿಂಗಳು ಆಂತರಿಕೆ ತನಿಖೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಪಿಎಫ್ಐನ ಎಲ್ಲ ಪ್ರಮುಖರ ಮಾಹಿತಿ ಕಲೆ ಹಾಕಿದ್ದರು. ಯಾವ ಸಮಯದಲ್ಲಿ ಯಾರು ಮನೆಯಲ್ಲಿರುತ್ತಾರೆ? ಎಷ್ಟೊತ್ತಿಗೆ ಎಲ್ಲಿಗೆ ಹೋಗುತ್ತಾರೆ ಎಂಬ ಮಾಹಿತಿಯನ್ನು ವಿಶ್ಲೇಷಿಸಿದ್ದರು. ಪ್ರಮುಖ ಪದಾಧಿಕಾರಿಗಳ ಚಲನವಲನದ ಮೇಲೆ ಕಣ್ಣಿಟ್ಟ ನಂತರವೇ ಈ ದಾಳಿ ನಡೆದಿದೆ.
ಎನ್ಐಎ ದಾಳಿಯು ಬಹಳ ಮೊದಲೇ ನಡೆಯಬೇಕಿತ್ತು. ಆದರೆ ಕೇರಳದ ಮಲಪ್ಪುರಂನಲ್ಲಿ ಪಿಎಫ್ಐ ಸಭೆ ಇದ್ದ ಕಾರಣ ದಾಳಿಯ ದಿನಾಂಕವನ್ನು ಮುಂದೂಡಬೇಕಾಯಿತು. ಬಹುತೇಕ ನಾಯಕರು ಮೀಟಿಂಗ್ಗೆ ತೆರಳಿದ್ದರು. ಆದರೆ ನಿನ್ನೆ ಬಹುತೇಕ ಎಲ್ಲ ಪ್ರಮುಖ ನಾಯಕರು ಬೆಂಗಳೂರಿನಲ್ಲಿಯೇ ಇದ್ದ ಕಾರಣ ಅದೇ ದಿನವನ್ನು ದಾಳಿಗೆ ಆರಿಸಿಕೊಳ್ಳಲಾಯಿತು.
ಕರ್ನಾಟಕದಲ್ಲಿ ದಾಳಿ ನಡೆಸಿದ ವೇಳೆ ಬಂಧಿತರಾದ ಪಿಎಫ್ಐನ ಆರು ಮಂದಿಯ ವಿವರ ಹೀಗಿದೆ.
- ಅನೀಸ್ ಅಹಮದ್: ಪಿಎಫ್ಐನ ರಾಜ್ಯಮಟ್ಟದ ನಾಯಕ ಅನೀಸ್ ಅಹಮದ್ ಬೆಂಗಳೂರಿನವರು. ಕಳೆದ 10 ದಿನಗಳಿಂದ ‘ಮಲಬಾರ್ ಕಾನ್ಫರೆನ್ಸ್’ ಹೆಸರಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
- ಅಫ್ಸರ್ ಪಾಷಾ: ರಾಜ್ಯಮಟ್ಟದ ನಾಯಕರಾದ ಅಫ್ಸರ್ ಪಾಷಾ ಅವರ ಮನೆಯ ಮೇಲೆ ಒಂದೂವರೆ ವರ್ಷದ ಹಿಂದೆ ಇಡಿ ರೇಡ್ ಆಗಿತ್ತು. ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ ನಂತರ ಪಾದರಾಯನಪುರದ ಟೆಲಿಕಾಂ ಲೇಔಟ್ನ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದರು.
- ಅಬ್ದುಲ್ ವಹೀದ್: ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿರುವ ಅಬ್ದುಲ್ ವಹೀದ್ ತಮಿಳುನಾಡು ಮೂಲದವರು. ಪಿಎಫ್ಐನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
- ಯಾಸಿರ್ ಹಸನ್: ಮೂಲತಃ ಮಂಗಳೂರಿನವರಾದ ಯಾಸಿರ್ ಹಸನ್ ಬೆಂಗಳೂರಲ್ಲಿ ಪಿಎಫ್ಐ ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದರು. ಕಾವವ್ಬೈರಸಂದ್ರದ ಇವರ ಮನೆಯಿಂದಲೇ ಪಿಎಫ್ಐನ ಕಚೇರಿ ಕೆಲಸಗಳನ್ನು ನಿರ್ವಹಿಸಲಾಗುತ್ತಿತ್ತು.
- ಮಹಮ್ಮದ್ ಶಕೀಬ್ (ಸಾಕಿಬ್): ತಮಿಳುನಾಡು ಮೂಲದ ಇವರು ರಿಚ್ಮಂಡ್ ಟೌನ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು.
- ಶಾಹಿದ್ ನಸೀರ್: ಬೆಂಗಳೂರು ಮೂಲದ ಶಾಹಿದ್ ನಸೀರ್ ಪಿಎಫ್ಐ ರಾಜ್ಯ ಘಟಕದ ಸೋಷಿಯಲ್ ಮೀಡಿಯಾ ಘಟಕದ ಉಸ್ತುವಾರಿಯಾಗಿದ್ದರು.