ಮಂಗಳೂರು: ರಾಜ್ಯದ ಹಲವೆಡೆ ನಿಷೇಧಿತ ಪಿಎಫ್ಐ ಮುಖಂಡರ ಮನೆಗಳ ಮೇಲೆ ಎನ್‌ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಸುಳ್ಯ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆಸಿ PFI ಮುಖಂಡರ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ನಿಷೇಧಿತ ಪಿಎಫ್ಐ ಮುಖಂಡರಿಗಾಗಿ ಎನ್‌ಐಎ ತಲಾಶ್ ನಡೆಸುತ್ತಿದೆ.
ಹೈದ್ರಾಬಾದ್ ನಿಂದ ಬಂದಿರೋ NIA ಅಧಿಕಾರಿಗಳು ಬೆಳಗಿನ ಜಾವ ಹಳೇ ಹುಬ್ಬಳ್ಳಿಯ ನುರಾನಿ ಪ್ಲಾಟ್ ನಲ್ಲಿರುವ ಎಸ್ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ ದಾಳಿ ನಡೆಸಿದ್ದು ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಹಾಘೂ ಇಸ್ಮಾಯಿಲ್ ಗೆ ನೋಟಿಸ್ ಕೊಟ್ಟಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆಗೆ 10 ಜನ ಅಧಿಕಾರಿಗಳ ತಂಡದಿಂದ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೆ ದಾಳಿ ನಡೆದಿದೆ. ಮೈಸೂರಿನ ಎನ್.ಆರ್ ಮೊಹಲ್ಲಾ, ಮಂಡಿ ಮೊಹಲ್ಲಾದಲ್ಲಿ ಕೆಲ ಕಾರ್ಯಕರ್ತರ ಮನೆಗಳಲ್ಲಿ ತಪಾಸಣೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ನಾನು ಕಳೆದ ಆರು ವರ್ಷದಿಂದ SDPI ನಲ್ಲಿ ಕೆಲಸ ಮಾಡುತ್ತಿದ್ದೆನೆ. ಇಂದು ಬೆಳಗ್ಗೆ ಐದು ಗಂಟೆಗೆ NIA ಅಧಿಕಾರಿಗಳು ಬಂದು ವಿಚಾರಣೆ ಮಾಡಬೇಕೆಂದರು. ನಾವು ಸಹಕಾರ ನೀಡಿದ್ದೆವೆ ಅವರು ಸಹ ಸೌಜನ್ಯ ಪೂರ್ವಕವಾಗಿ ನಡೆಸಿಕೊಂಡರು. ನಮ್ಮ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ಸಂಜೆ ಅಥವಾ ಈ ತಿಂಗಳ ಏಳರಂದು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಈ ವಿಚಾರಣೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೆವೆ. SDPI ಗೂ PFI ಗೂ ಯಾವುದೇ ಸಂಬಂಧವಿಲ್ಲ. ಅವರ ತತ್ವ ಸಿದ್ದಾಂತಗಳೇ ಬೇರೆ ನಮ್ಮ ಸಿದ್ದಾಂತಗಳೇ ಬೇರೆ ಎಂದು ಇಸ್ಮಾಯಿಲ್ ತಿಳಿಸಿದರು.
ಮೈಸೂರಿನಲ್ಲಿ ಪಿಎಫ್ಐ ಮಾಜಿ ಕಾರ್ಯದರ್ಶಿ ಎನ್‌ಐಎ ವಶಕ್ಕೆ
ಮಂಡಿ ಮೊಹಲ್ಲಾದ ಮನೆಯಲ್ಲಿ ಸುಲೈಮಾನ್ ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಮುಖ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಬಹುಮಾನ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುತ್ತಮುತ್ತ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಶೋಧ ಕಾರ್ಯ ನಡೆಸುತ್ತಿದೆ. ಪುತ್ತೂರು, ಬೆಳ್ಳಾರೆ, ಸುಳ್ಯದಲ್ಲಿ ಎನ್‌ಐಎ ಅಧಿಕಾರಿಗಳ ಒಟ್ಟು ಆರು ತಂಡಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿಕೊಳ್ಳಲಾಗುತ್ತಿದೆ. ನಾಲ್ವರು ಅರೋಪಿಗಳ ಸುಳಿವು ಕೊಟ್ಟವರಿಗೆ ಒಟ್ಟು 14 ಲಕ್ಷ ನಗದು ಬಹುಮಾನ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಇಬ್ಬರು ಆರೋಪಿ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂಪಾಯಿ ಹಾಗೂ ಇನ್ನಿಬ್ಬರ ಆರೋಪಗಳ ಬಗ್ಗೆ ಮಾಹಿತಿ ತಿಳಿಸಿದರೆ 2 ಲಕ್ಷ ಬಹುಮಾನ ರೂ. ನಗದು ಬಹುಮಾನ ನೀಡುವುದಾಗಿ ಎನ್‌ಐಎ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಮೊಹಮ್ಮದ್ ಮುಸ್ತಫಾ ಮತ್ತು ತುಫೈಲ್ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನ, ಇನ್ನು ಇಬ್ಬರು ಆರೋಪಿಗಳಾದ ಉಮರ್ ಫಾರೂಕ್ ಹಾಗೂ ಅಬೂಬಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ 2 ಲಕ್ಷ ಬಹುಮಾನ ರೂಪಾಯಿ ನಗದು ಬಹುಮಾನ ನೀಡುವಾಗಿ ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ಈಗ ಈ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ. ಬೆಳ್ಳಾರೆ ಗ್ರಾ.ಪಂ ಸದಸ್ಯ ಇಕ್ಬಾಲ್ ಬೆಳ್ಳಾರೆ, ಸುಳ್ಯದ ಇಬ್ರಾಹಿಂ ಶಾ, SDPI ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಸೇರಿದಂತೆ ಇಂದು ಮುಂಜಾನೆ ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಗೂ ಪಿಎಫ್ಐ ನಿಷೇಧಕ್ಕೂ ಇದೆ ನಂಟು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿ ಸೆಪ್ಟೆಂಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣ ಪ್ರಸ್ತಾಪವಾಗಿತ್ತು. ಪಿಎಫ್ಐ ನಿಷೇಧಕ್ಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸನ್ನೂ ಉಲ್ಲೇಖಿಸಿತ್ತು.
ಸಂಜಿತ್ (ಕೇರಳ 2021), ವಿ.ರಾಮಲಿಂಗಮ್ (ತಮಿಳುನಾಡು 2019), ನಂದು (ಕೇರಳ 2021), ಅಭಿಮನ್ಯು (ಕೇರಳ 2018), ಬಿಬಿನ್ (ಕೇರಳ 2017), ಶರತ್ (ಕರ್ನಾಟಕ 2017), ಆರ್.ರುದ್ರೇಶ್ (ಕರ್ನಾಟಕ 2016), ಪ್ರವೀಣ್ ಪೂಜಾರಿ (ಕರ್ನಾಟಕ 2016), ಶಶಿ ಕುಮಾರ (ತಮಿಳುನಾಡು 2016) ಮತ್ತು ಪ್ರವೀಣ್ ನೆಟ್ಟಾರು (ಕರ್ನಾಟಕ 2022) ಅವರ ಕೊಲೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಪಿಎಫ್ಐ ಭಾಗಿಯಾಗಿದೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವುದು ಹಾಗೂ ಭಯ ಹೆಚ್ಚಿಸುವ ಉದ್ದೇಶವನ್ನು ಪಿಎಫ್ಐ ಹೊಂದಿದೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ಹೇಳಿತ್ತು.
Published On - 8:08 am, Sat, 5 November 22