ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡ ಕಡೆಗಣನೆ: ತಪ್ಪೊಪ್ಪಿಕೊಂಡ ಕೇಂದ್ರ ಸಚಿವ ಕಿಶನ್ ರೆಡ್ಡಿ
‘ಕೇಂದ್ರ ಪ್ರವಾಸೋದ್ಯಮ ಇಲಾಖೆ ಕರ್ನಾಟಕದಲ್ಲಿ ಈ ಕಾರ್ಯಕ್ರಮ ಮಾಡುತ್ತಿದೆ. ಹಾಗಾಗಿ ಕನ್ನಡ ಬಳಕೆಯ ಅಗತ್ಯ ಇಲ್ಲ’ ಎಂದು ಕಿಶನ್ ರೆಡ್ಡಿ ಈ ಮೊದಲು ಹೇಳಿದ್ದರು.
ಬೆಂಗಳೂರು: ನಗರದ ಖಾಸಗಿ ಹೊಟೆಲ್ನಲ್ಲಿ ನಡೆಯುತ್ತಿರುವ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಕನ್ನಡಕ್ಕೆ ಆದ್ಯತೆ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಮೊದಲು ಹಾರಿಕೆಯ ಉತ್ತರ ನೀಡಿದ್ದ ರೆಡ್ಡಿ, ‘ಕೇಂದ್ರ ಪ್ರವಾಸೋದ್ಯಮ ಇಲಾಖೆ ಕರ್ನಾಟಕದಲ್ಲಿ ಈ ಕಾರ್ಯಕ್ರಮ ಮಾಡುತ್ತಿದೆ. ಹಾಗಾಗಿ ಕನ್ನಡ ಬಳಕೆಯ ಅಗತ್ಯ ಇಲ್ಲ’ ಎಂದು ಹೇಳಿದ್ದರು. ಕನ್ನಡ ಕಡೆಗಣನೆ ಬಗ್ಗೆ ಮಾಧ್ಯಮಗಳಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಅರಿವಾದ ನಂತರ, ತಪ್ಪಾಗಿದೆ ಎಂದು ಒಪ್ಪಿಕೊಂಡರು. ಸಮ್ಮೇಳನದಲ್ಲಿ ಇನ್ನು ಮುಂದೆ ಕನ್ನಡ ಬಳಕೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಇದು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹಾಗಾಗಿ ಅಧಿಕಾರಿಗಳಿಂದ ಇಂಥ ಲೋಪವಾಗಿದೆ. ನನ್ನ ಗಮನಕ್ಕೆ ಬಂದ ತಕ್ಷಣ ಡಿಜಿಟಲ್ ಬೋರ್ಡ್ ಬದಲಾವಣೆ ಮಾಡಲಾಗಿದೆ. ಈಗ ಬ್ಯಾನರ್ ಕೂಡ ಬದಲಾವಣೆ ಮಾಡುತ್ತಿದ್ದೇವೆ. ಕನ್ನಡ ಕಡೆಗಣನೆ ಮಾಡಿಲ್ಲ ಎಂದು ವಿವರಿಸಿದರು.
ಸಮ್ಮೇಳನದಲ್ಲಿ ಕನ್ನಡ ನಿರ್ಲಕ್ಷ್ಯದ ಬಗ್ಗೆ ಇದಕ್ಕೂ ಮೊದಲು ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಂದ್ರ ಪ್ರವಾಸೋದ್ಯಮ ಇಲಾಖೆ ಮಹಾ ನಿರ್ದೇಶಕ ಗಂಜಿ ಕಮಲವರ್ಧನ್ ರಾವ್ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡು ಕೂಡಲೇ ಬ್ಯಾನರ್‌ನಲ್ಲಿ ಕನ್ನಡ ಭಾಷೆ ಬಳಸುವಂತೆ ತಾಕೀತು ಮಾಡಿದ್ದರು.
ಪ್ರವಾಸೋದ್ಯಮ ಇಲಾಖೆಗೆ ಕೇಂದ್ರ ಅನುದಾನ ಬಿಡುಗಡೆ ಮಾಡದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ಕರ್ನಾಟಕ ವಿಫಲವಾಗಿದೆ ಅಂತ ಅಧಿಕಾರಿ ಹೇಳಬಾರದಿತ್ತು. ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ ಎಂದರೆ ನಾನು ವಿಫಲವಾಗಿಲ್ಲ. ಅದಷ್ಟು ಬೇಗ ಪ್ರಸ್ತಾವನೆ ಕಳಿಸುತ್ತೇನೆ. ಕೇಂದ್ರ ಸಚಿವರು ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪ್ರವಾಸೋದ್ಯಮದಲ್ಲಿ ಕರ್ನಾಟಕ ದೇಶದಲ್ಲಿಯೇ ನಂಬರ್ 1 ಆಗಬೇಕು. ಹಾಗಾಗಿ ಹೆಚ್ಚು ಅನುದಾನ ಬಿಡುಗಡೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಯಕ್ತ ಸಿದ್ದಗಂಗಾ ಮಠದ ಹತ್ತು ಸಾವಿರ ಮಕ್ಕಳಿಂದ ಕನ್ನಡ ಹಾಡುಗಳ ಗಾಯನ ಇದನ್ನೂ ಓದಿ: ಕೊಪ್ಪಳ: ಕನ್ನಡ ಹಾಡು ಗಾಯನ ಕಾರ್ಯಕ್ರಮದಲ್ಲಿ ತಲೆ ಸುತ್ತಿ ಕೆಳಗೆ ಬಿದ್ದ ವಿದ್ಯಾರ್ಥಿಗಳು
Published On - 4:49 pm, Thu, 28 October 21