ಎಸ್ಪಿಯಿಂದ ಸಚಿವರಿಗೇ ತಡೆ ಪ್ರಕರಣ: ಸಣ್ಣಪುಟ್ಟ ತಪ್ಪನ್ನು ದೊಡ್ಡದು ಮಾಡಬೇಕಿಲ್ಲ ಎಂದ ಪರಮೇಶ್ವರ್, ಖಾದರ್
ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ಪೊಲೀಸರು ಸಚಿವರನ್ನು ತಡೆದ ಪ್ರಕರಣವನ್ನು ದೊಡ್ಡದು ಮಾಡಬೇಕಿಲ್ಲ, ಇದು ಸಣ್ಣಪುಟ್ಟ ಹ್ಯೂಮನ್ ಎರರ್ ಎಂದು ಡಿಸಿಎಂ ಜಿ. ಪರಮೇಶ್ವರ್ ಹಾಗೂ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರಿಗೆ ಇರುವ ಡೈರೆಕ್ಷನ್ ಅವರು ಪಾಲಿಸುತ್ತಾರೆ ಎಂದು ಪರಮೇಶ್ವರ್ ಹೇಳಿದ್ದರೆ, ಹ್ಯೂಮನ್ ಎರರ್ ಸ್ವಾಭಾವಿಕ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ಮೈಸೂರು ದಸರಾ ಹಿನ್ನೆಲೆ ನಂದಿಧ್ವಜ ಪೂಜೆ ಸಂದರ್ಭ ಕೆಲ ಸಚಿವರನ್ನು ಎಸ್.ಪಿ. ರಿಷ್ಯಂತ್ ತಡೆದಿದ್ದ ಪ್ರಕರಣ ತೀವ್ರ ಸ್ವರೂಪ ಪಡೆದಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗಳ ನಡೆಯನ್ನೇ ದೊಡ್ಡ ವಿಚಾರ ಮಾಡೋದು ಬೇಡ. ಕೆಲವು ಸಣ್ಣಪುಟ್ಟ ತಪ್ಪುಗಳು ನಡೆಯುತ್ತವೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
‘ಲಕ್ಷಾಂತರ ಜನ ಸೇರಿದಾಗ ಕೆಲ ಸಣ್ಣಪುಟ್ಟ ವಿಚಾರ ನಡೆಯುತ್ತವೆ’
ಲಕ್ಷಾಂತರ ಜನ ಸೇರಿದಾಗ ಕೆಲ ಸಣ್ಣಪುಟ್ಟ ವಿಚಾರ ನಡೆಯುತ್ತವೆ. ದಸರಾ ವೀಕ್ಷಣೆಗೆ 10 ದಿನಗಳಲ್ಲಿ 15-20 ಲಕ್ಷ ಜನ ಬಂದಿದ್ದಾರೆ. ಅದನ್ನೆಲ್ಲಾ ಪೊಲೀಸರು ಹ್ಯಾಂಡಲ್ ಮಾಡಿದ್ದಾರಲ್ಲ. ಏನೋ ಆಗಿಹೋಗಿದ್ದು ಅದನ್ನೇ ಇಶ್ಯೂ ಮಾಡೋದು ಎಷ್ಟು ಸರಿ? ಎಂದು ಡಿಸಿಎಂ ಪರಮೇಶ್ವರ್ ಪ್ರಶ್ನಿಸಿದ್ದಾರೆ. ತಾನು ಘಟನೆ ವಿಡಿಯೋ ನೋಡಿದ್ದು, ಮ್ಯಾನ್ ಹ್ಯಾಂಡಲಿಂಗ್ ಆಗಿಲ್ಲ. ಸಚಿವರನ್ನು ಅಡ್ಡ ಹಾಕಿದ್ದಾರೆ. ಪೊಲೀಸರಿಗೆ ಇರುವ ಡೈರೆಕ್ಷನ್ ಅವರು ಪಾಲಿಸುತ್ತಾರೆ. ಸಿಎಂ ಒಬ್ಬರೇ ಹೋಗಬೇಕು ಎಂಬ ಶಿಷ್ಟಾಚಾರ ಇದ್ದರೆ ಪಾಲಿಸಿರಬಹುದು ಎಂಬುದು ತನ್ನ ಊಹೆ ಎಂದವರು ಹೇಳಿದ್ದಾರೆ. ದಲಿತ ಸಚಿವರಿಗೆ ಅವಮಾನ ಎಂಬ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ಮಾತು ಎತ್ತಿದರೆ ದಲಿತ ಸಚಿವರು ಅಂತೀರಾ? ಸಚಿವರು ಅನ್ನಬೇಕು, ದಲಿತ ಸಚಿವರು ಅಂತ ಯಾಕೆ ಹೇಳಬೇಕು? ಬೇರೆ ಸಚಿವರನ್ನೂ ನೀವು ಜಾತಿಯಿಂದ ಕರೆಯುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಂದಿಧ್ವಜ ಪೂಜೆ ವೇಳೆ ಸಚಿವರನ್ನೇ ತಡೆದ ಪ್ರಕರಣ: ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಸ್ಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ
‘ಹ್ಯೂಮನ್ ಎರರ್ ಸ್ವಾಭಾವಿಕ’
ನಂದಿಧ್ವಜ ಪೂಜೆ ಸಂದರ್ಭ ಕೆಲ ಸಚಿವರನ್ನು ಪೊಲೀಸರು ಉದ್ದೇಶಪೂರ್ವಕವಾಗಿ ತಡೆದಿರಲಿಕ್ಕಿಲ್ಲ. ಹ್ಯೂಮನ್ ಎರರ್ ಸ್ವಾಭಾವಿಕ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡ ಹೇಳಿದ್ದಾರೆ. ಪಾಪ ಪೊಲೀಸರು ಒಂದು ತಿಂಗಳಿಂದ ಊಟ- ತಿಂಡಿ ಮಾಡಿಲ್ಲ. ಒಂದು ಸಣ್ಣ ತಪ್ಪು ಆದಾಗ ಅದನ್ನು ದೊಡ್ಡದ್ದು ಮಾಡಬಾರದು. ಭದ್ರತೆ ವಿಚಾರದಲ್ಲಿ ಈ ರೀತಿ ಆದಾಗ ಸಣ್ಣ ಸಣ್ಣದನ್ನು ಹುಡುಕಬಾರದು ಎಂದವರು ತಿಳಿಸಿದ್ದಾರೆ.
‘ಶಿಷ್ಟಾಚಾರ ಇದ್ದಿದ್ದರೆ ನಮಗೆ ಮೊದಲೇ ಗೊತ್ತಾಗುತ್ತಿತ್ತು’
ಆದರೆ ನಿನ್ನೆಯ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ಕೆ.ಎಸ್.ಬಸವಂತಪ್ಪ, ಶಿಷ್ಟಾಚಾರ ಇದ್ದಿದ್ದರೆ ನಮಗೆ ಮೊದಲೇ ಗೊತ್ತಾಗುತ್ತಿತ್ತು. ಯಾವ ಕಾರಣಕ್ಕೆ ತಡೆದರು ಅನ್ನೋದರ ಬಗ್ಗೆ ತನಿಖೆ ಮಾಡಬೇಕಿದೆ . ಸಚಿವರು ಅಂತಾ ಗೊತ್ತಿದ್ದರೂ ತಡೆಗಟ್ಟಿದ್ದು ಸರಿಯಾದ ಕ್ರಮ ಅಲ್ಲ. ಈ ವಿಚಾರ ಸಿಎಂಗೆ ಗೊತ್ತಾಗ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸಿಎಸ್ಗೆ ಸೂಚನೆ ನೀಡಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:53 pm, Thu, 22 October 26
