
ಬೆಂಗಳೂರು/ಬೆಳಗಾವಿ, ಜನವರಿ 20: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಲಗೂರು ಗ್ರಾಮದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕದ್ದಿದ್ದ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಯ ಅಂಚೆಪಾಳ್ಯದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಶ್ರೀಕಾಂತ್ ಬಂಧಿತ ವ್ಯಕ್ತಿಯಾಗಿದ್ದಾನೆ. 2 ಪ್ರತ್ಯೇಕ ಪ್ರಕರಣಗಳ ಸಂಬಂಧ ಆರೋಪಿಯಿಂದ 42 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ವಶಪಡಿಸಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಸಿದ್ದುಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.
ಆರೋಪಿಗಳಾದ ಸಿದ್ದು ಮತ್ತು ಶ್ರೀಕಾಂತ್ ಸೇರಿ ಸುಮಾರು 248 ಗ್ರಾಂ. ತೂಕದ ಚಿನ್ನಾಭರಣವನ್ನು ಅಲಗೂರು ಗ್ರಾಮದ ಮನೆಯಿಂದ ಕದ್ದಿದ್ದರು. ಈ ಪೈಕಿ ಸಿದ್ದು ಮೇಲೆ ಈವರೆಗೆ 40ಕ್ಕೂ ಅಧಿಕ ಪ್ರಕರಣಗಳಿವೆ ಎನ್ನಲಾಗಿದ್ದು, ಶ್ರೀಕಾಂತ್ ಮಳವಳ್ಳಿ ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕಳ್ಳತನ ಮಾಡ್ತಿದ್ದ. ಬಳಿಕ ಸಂಬಂಧಿ ಸಿದ್ದು ಜತೆ ಸೇರಿ ಈತನೂ ಮನೆಗಳ್ಳತನಕ್ಕೆ ಇಳಿದಿದ್ದ. ಬೈಕ್ನಲ್ಲಿ ಬಂದು ಕಳ್ಳತನ ಮಾಡಿ ಖದೀಮರು ಪರಾರಿಯಾಗುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಕಳೆದ ಆಗಸ್ಟ್ನಲ್ಲಿ ಮನೆಯವರೆಲ್ಲ ತಮಿಳುನಾಡಿಗೆ ಹೋದಾಗ ಆರೋಪಿಗಳು ಮನೆಗೆ ಕನ್ನ ಹಾಕಿದ್ದರು. ಬಂಧಿತ ಶ್ರೀಕಾಂತ್ ವಿಚಾರಣೆ ವೇಳೆ ಕದ್ದ ಚಿನ್ನಾಭರಣವನ್ನು ಇವರು ಗಿರಿವಿಗೆ ಇಟ್ಟಿದ್ದರು ಎಂಬುದು ಕೂಡ ಗೊತ್ತಾಗಿದೆ.
ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ; ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ!
ದೇಗುಲದ ಬಾಗಿಲು ಮುರಿದು ಕಳವು
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ದೂಪದಾಳ ಗ್ರಾಮದ ಭೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಬೆಳ್ಳಿ, ಚಿನ್ನಾಭರಣವನ್ನು ಖದೀಮರು ಹೊತ್ತೊಯ್ದಿದ್ದಾರೆ. ದೇಗುಲದ ಬಾಗಿಲು ಮುರಿದು ಒಳಪ್ರವೇಶಿಸಿರುವ ಆರೋಪಿಗಳು 2 ಕೆಜಿ ತೂಕದ ಬೆಳ್ಳಿಯ ಕುದುರೆ ಮತ್ತು ಎರಡು ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಬೀರೇಶ್ವರ ದೇವರ ಖಂಚಿನ ಮೂರ್ತಿಯನ್ನೂ ಹೊತ್ತೊಯ್ದಿದ್ದ ಆರೋಪಿಗಳು ಬಳಿಕ ಅದನ್ನು ಗ್ರಾಮದ ಹೊರವಲಯದಲ್ಲಿ ಎಸೆದು ಪರಾರಿಯಾಗಿದ್ದಾರೆ. ಗ್ರಾಮದ ಹೊರ ವಲಯದಲ್ಲಿ ಬಿದ್ದ ದೇವರ ಮೂರ್ತಿ ಕಂಡು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.