ನೈಜೀರಿಯಾದಲ್ಲಿ ಕುಳಿತು ಬೆಂಗಳೂರು ಮೂಲದ ವ್ಯಕ್ತಿಗೆ ದೋಖಾ: 2.16 ಕೋಟಿ ರೂ. ಮರಳಿಸಿದ್ದು ಗೋಲ್ಡನ್ ಅವರ್!
ಬೆಂಗಳೂರಿನಲ್ಲಿ ನಡೆದ 2.16 ಕೋಟಿ ರೂ. ಸೈಬರ್ ವಂಚನೆ ಪ್ರಕರಣದಲ್ಲಿ, ಸಂತ್ರಸ್ತರು 'ಗೋಲ್ಡನ್ ಅವರ್'ನಲ್ಲಿ ದೂರು ನೀಡಿದ ಕಾರಣ ಸಂಪೂರ್ಣ ಹಣ ಮರಳಿ ಸಿಕ್ಕಿದೆ. ನೈಜೀರಿಯಾದಿಂದ ನಡೆದ ಈ ಮೋಸದಲ್ಲಿ, ಸೈಬರ್ ಕ್ರೈಂ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ವಂಚಕರ ನಕಲಿ ಖಾತೆಯನ್ನು ಫ್ರೀಜ್ ಮಾಡಿದ್ದರು. ಬಳಿಕ ಕೋರ್ಟ್ ಆದೇಶ ಪಡೆದು ವಾರಸುದಾರರಿಗೆ ಹಣ ಹಿಂತಿರುಗಿಸಲಾಗಿದೆ. ಆದರೆ ಪ್ರಕರಣ ಸಂಬಂಧ ಈವರೆಗೆ ಯಾರ ಬಂಧನವೂ ಆಗಿಲ್ಲ.

ಬೆಂಗಳೂರು, ಜನವರಿ 20: ಸೈಬರ್ ವಂಚನೆ ಪ್ರಕರಣಗಳು ಮಾಮೂಲು ಎಂಬಷ್ಟರ ಮಟ್ಟಿಗೆ ಹೆಚ್ಚಿದ್ದು, ಕೋಟಿ ಕೋಟಿ ಹಣವನ್ನು ವಂಚಕರು ಲಪಟಾಯಿಸುವ ಕೇಸ್ಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಆದ್ರೆ ವಂಚನೆಗೆ ಒಳಗಾದವರು ತುರ್ತಾಗಿ ಈ ಬಗ್ಗೆ ಕೇಸ್ ದಾಖಲಿಸಿದಲ್ಲಿ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂಬುದನ್ನು ಪ್ರಕರಣವೊಂದು ಸಾಬೀತು ಪಡಿಸಿದೆ. ಗೋಲ್ಡನ್ ಅವರ್ನಲ್ಲಿ ಕಂಪ್ಲೇಂಟ್ ನೀಡಿದ್ದ ಕಾರಣ ವಂಚಕರ ಪಾಲಾಗುತ್ತಿದ್ದ ಬರೋಬ್ಬರಿ 2.16 ಕೋಟಿ ಹಣ ಮರಳಿ ಕೈಸೇರಿದೆ.
ಘಟನೆ ಏನು?
ಗ್ರೂಪ್ ಫಾರ್ಮ್ ಮತ್ತು ರೆಡ್ಡೀಸ್ ಲ್ಯಾಬೋರೇಟರಿ ಎಂಬ ಕಂಪನಿಗಳ ನಡುವೆ ವ್ಯವಹಾರವಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ನಕಲಿ ಇಮೇಲ್ ಐಡಿ ಮೂಲಕ ಸೈಬರ್ ವಂಚನೆ ನಡೆಸಿದ್ದರು. ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಹೆಸರಲ್ಲಿ ರೆಡ್ಡೀಸ್ ಲ್ಯಾಬೋರೇಟರಿಗೆ ಇಮೇಲ್ ಬಂದಿದ್ದು, ಇದನ್ನು ಗಮನಿಸಿದ ರೆಡ್ಡೀಸ್ ಲ್ಯಾಬೋರೇಟರಿ 2.16 ಕೋಟಿ ರೂಪಾಯಿ ಹಣವನ್ನು ಪೇಮೆಂಟ್ ಮಾಡಿತ್ತು. ಹಣ ಪಾವತಿ ವಿಚಾರ ಗೊತ್ತಾಗಿದ್ದೇ ತಡ ಗ್ರೂಪ್ ಫಾರ್ಮಾ ಅಕೌಂಟೆಂಟ್ ಈ ಬಗ್ಗೆ ದೂರು ದಾಖಲಿಸಿದ್ದರು. ನೈಜೀರಿಯಾದಲ್ಲಿ ಕುಳಿತ ವಂಚಕನೋರ್ವ ನೀಡಿದ್ದ ಗುಜರಾತ್ ಮೂಲದ ಮಹಿಳೆ ಪಟೇಲ್ ದಕ್ಷ್ಯಾ ಬೆನ್ ಹೆಸರಿನ ನಕಲಿ ಖಾತೆಗೆ ಹಣ ವರ್ಗಾವಣೆ ಆಗಿರೋದು ತನಿಖೆ ವೇಳೆ ಗೊತ್ತಾಗಿತ್ತು.
ಇದನ್ನೂ ಓದಿ: ಸೈಬರ್ ಸ್ಕ್ಯಾಮ್ ಬಗ್ಗೆ ದೂರು ನೀಡುವುದು ಹೇಗೆ?; 24 ಗಂಟೆಗಳ ಕಾಲ ತೆರೆದಿರುತ್ತೆ ಈ ಪೋರ್ಟಲ್
ಇನ್ನು ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ ದೂರು ಪಡೆದ ಒಂದೇ ಗಂಟೆಯಲ್ಲಿ ಅಕೌಂಟ್ ಜಾಲಾಡಿದ್ದ ಸೈಬರ್ ಕ್ರೈಮ್ ಪೊಲೀಸರು, ಹಣ ವರ್ಗಾವಣೆಯಾಗದಂತೆ ಅಕೌಂಟ್ ಫ್ರೀಜ್ ಮಾಡಿದ್ದರು. ಬಳಿಕ ಕೋರ್ಟ್ ಮೂಲಕ 2.16 ಕೋಟಿ ಹಣ ಬಿಡುಗಡೆಗೆ ಆದೇಶ ಪಡೆದು, ಹಣವನ್ನೀಗ ವಾಪಸ್ ನೀಡಲಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸೈಬರ್ ವಂಚನೆ ಬಗ್ಗೆ ಡಿಸೆಂಬರ್ನಲ್ಲಿ ಕೇಸ್ ದಾಖಲಾಗಿತ್ತು. ಘಟನೆ ನಡೆದು 30 ನಿಮಿಷಗಳ ಒಳಗೆ ನಮಗೆ ದೂರು ಬಂದಿದ್ದು, ಈ ರೀತಿ ಗೋಲ್ಡನ್ ಅವರ್ನಲ್ಲಿ ಕಂಪ್ಲೇಂಟ್ ಕೊಟ್ಟರೆ ಅಕೌಂಟ್ ಫ್ರೀಜ್ ಮಾಡಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಕೌಂಟ್ ಹೋಲ್ಡರ್, ಅಕೌಂಟ್ ಕ್ರಿಯೇಟರ್ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
