ಬೆಂಗಳೂರು: ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕಾಂಗ್ರೆಸ್‌ನಲ್ಲೇ ಅಪಸ್ವರ!
GBA Election: ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ನಲ್ಲೇ ಇವಿಎಂ ಪರ ಹಾಗೂ ಬ್ಯಾಲೆಟ್ ಪೇಪರ್ ಪರ ಅಭಿಪ್ರಾಯಗಳು ವ್ಯಕ್ತವಾಗಿವೆ. ಬಿಜೆಪಿ ನಾಯಕರು ಬ್ಯಾಲೆಟ್ ಪೇಪರ್ ಬಳಸಿದರೂ ತಮ್ಮ ಗೆಲುವು ಖಚಿತ ಎಂದಿದ್ದಾರೆ.

ಬೆಂಗಳೂರು, ಜನವರಿ 21: ಸುಪ್ರೀಂ ಕೋರ್ಟ್ ಸೂಚನೆ ಬೆನ್ನನ್ನೇ ಜಿಬಿಎ (GBA) ಚುನಾವಣೆಯ ತಯಾರಿ ಬಿರುಸಿನಿಂದ ಸಾಗಿದೆ. ಜಿಬಿಎ ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗ ತಯಾರಿ ಮಾಡಿಕೊಳ್ಳುತ್ತಿದೆ. ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಲು ಆಯೋಗ ನಿರ್ಧಾರ ಮಾಡಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ನಲ್ಲೇ (Congress) ಅಪಸ್ವರ ಎದ್ದಿದೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಸುರೇಶ್, ನಾವು ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಮತ್ತೆ ಬ್ಯಾಲೆಟ್ ಪೇಪರ್ ತರುವುದು ಬೇಡ ಎನಿಸುತ್ತಿದೆ ಎಂದಿದ್ದಾರೆ.
ಮತ್ತೆ ಹಿಂದಕ್ಕೆ ಹೆಜ್ಜೆ ಹಾಕೋದು ಬೇಡ: ಇವಿಎಂ ಪರ ಡಿಕೆ ಸುರೇಶ್ ಬ್ಯಾಟ್
ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸುವುದು ನಾವೇ. ನಮ್ಮದೇ ಸರ್ಕಾರ ಇದೆ. ಹೀಗಾಗಿ ಅಕ್ರಮ ನಡೆಯುತ್ತದೆ ಎಂದು ಹೇಳಲಾಗದು. ಕೇಂದ್ರದಲ್ಲಾದರೆ ಬೇರೆ ವಿಚಾರ. ನಾವೀಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿರುವುದರಿಂದ ಮತ್ತೆ ಹಿಂದಕ್ಕೆ ಬರುವ ಅಗತ್ಯ ಇಲ್ಲ ಎನಿಸುತ್ತದೆ. ಈ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಏತನ್ಮಧ್ಯೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಇವಿಎಂನಿಂದ ಮತಗಳ್ಳತನ ಅಗುತ್ತಿದೆ. ಹೀಗಾಗಿ ಬ್ಯಾಲೆಟ್ ಪೇಪರ್ ಒಳ್ಳೆಯದು ಎಂದು ಹೇಳಿದ್ದಾರೆ. ಮತಗಳ್ಳತನ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಬ್ಯಾಲೆಟ್ ಪೇಪರ್ ಚುನಾವಣೆ ಮಾಡಿದರೆ ಒಳ್ಳೆಯದು ಎಂದಿದ್ದಾರೆ.
ಬ್ಯಾಲೆಟ್ ಪೇಪರ್ ಬಳಸಿದರೂ ಬಿಜೆಪಿ ಗೆಲ್ಲೋದು ಪಕ್ಕಾ: ಅಶೋಕ್
ಇವಿಎಂ ತಂದಿದ್ದೇ ಕಾಂಗ್ರೆಸ್, ಈಗ ಅವರಿಗೆ ನಂಬಿಕೆ ಇಲ್ವಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಬ್ಯಾಲೆಟ್ ಪೇಪರ್ ಆದರೂ ತರಲಿ, ಏನಾದರೂ ತರಲಿ. ಜಿಬಿಎ ಚುನಾವಣೆಯಲ್ಲಿ ಬಿಜೆಪಿನೇ ಗೆಲ್ಲೋದು ಎಂದಿದ್ದಾರೆ.
ಹೆಚ್.ಕೆ.ಪಾಟೀಲ್, ಸಿಟಿ ರವಿ ಮಧ್ಯೆ ಇವಿಎಂ ಫೈಟ್
ನಮಗೆ ಇವಿಎಂ ಮೇಲೆ ಅನುಮಾನ ಇದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಪರಿಷತ್ ಸದಸ್ಯ ಸಿ.ಟಿ.ರವಿ, ವಿಧಾನಸಭೆ ಚುನಾವಣೆಯಲ್ಲಿ ಹೇಗೆ ಗೆದ್ದಿದ್ದು ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿಕೊಂಡರೆ ತಪ್ಪೇನಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಎಲ್ಲಾ ಕಡೆ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸುತ್ತಿದ್ದಾರೆ. ನಮ್ಮಲ್ಲಿ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ರಾಹುಲ್ ಮೆಚ್ಚಿಸಲು ಬ್ಯಾಲೆಟ್ ಪೇಪರ್ ಬಳಕೆ: ಸದಾನಂದ ಗೌಡ
ಬ್ಯಾಲೆಟ್ ಪೇಪರ್ ಬಳಕೆಯಿಂದ ಗೊಂದಲವಾಗುತ್ತದೆ ಎಂದು ಮಾಜಿ ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ತಾಂತ್ರಿಕವಾಗಿ ಮುಂದುವರೆಯುವ ವೇಳೆ ಹೀಗೆ ಮಾಡಬಾರದು. ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪಾಲಿಕೆ ಆಯುಕ್ತರ ಉಪಸ್ಥಿತಿಗೆ ಬಿಜೆಪಿ ಆಕ್ಷೇಪ
ರಾಜ್ಯ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಪಾಲಿಕೆ ಆಯುಕ್ತರ ಉಪಸ್ಥಿತಿಗೆ ಆಕ್ಷೇಪ ವ್ಯಕ್ತವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯೂ ಆಗಿರುವ ರಾಜೇಂದ್ರ ಚೋಳನ್ ಭಾಗಿಯಾಗಿದ್ದಕ್ಕೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯುಕ್ತರ ಜತೆ ಕುಳಿತುಕೊಳ್ಳುವುದೆಷ್ಟು ಸೂಕ್ತ? ಇದು ಹಿತಾಸಕ್ತಿಗಳ ಸಂಘರ್ಷ ಆಗುವುದಿಲ್ಲವೇ ಎಂದು ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
