ಬೆಂಗಳೂರು, (ಫೆಬ್ರವರಿ 12): ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಒಡಿಶಾದ ಖ್ಯಾತ ರ‍್ಯಾಪರ್ ಆಗಿರುವ ಅಭಿನವ್ ಸಿಂಗ್ ಎನ್ನುವರು ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಪತ್ನಿ ಕಿರುಕುಳದಿಂದ ಅಭಿನವ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಒಡಿಶಾ ಮೂಲದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್, ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಆದ್ರೆ, ಏನಾಗಿತ್ತೋ ಏನೋ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮೃತ ಅಭಿನವ್ ಸಿಂಗ್ ಅವರ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಡತ್ನೋಟ್ನಲ್ಲಿ ಹೆಂಡ್ತಿ ಕಿರುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಅತುಲ್ ಹೆಂಡ್ತಿ ಸೇರಿದಂತೆ ಆಕೆಯ ಸಂಬಂಧಿಕರನ್ನು ಬಂಧಿಸಿದ್ದರು.
ಈ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅತುಲ್ ಸಾವಿಗೆ ಮರುಕ ವ್ಯಕ್ತಪಡಿಸಿದ್ದರು. ಇನ್ನು ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಮಾರತ್ ಹಳ್ಳಿ ಪೊಲೀಸರು ತನಿಖೆಗೆ ಕೈಗೊಂಡಿದ್ದು, ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ತಿಳಿದುಬರಬೇಕಿದೆ.
Published On - 7:37 pm, Wed, 12 February 25