AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ದರ ಇಳಿಕೆಗೆ ಇದೊಂದೇ ಮಾರ್ಗ: ಸಿದ್ದರಾಮಯ್ಯಗೆ ಮಹತ್ವದ ಸಲಹೆ ನೀಡಿದ ತೇಜಸ್ವಿ ಸೂರ್ಯ

ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ ಬಿಎಂಆರ್‌ಸಿಎಲ್ ಪ್ರಯಾಣಿಕರ ಮೇಲೆ ಗದಾ ಪ್ರಹಾರ ಮಾಡಿದೆ. ದರ ಏರಿಕೆಯಿಂದ ಕಂಗೆಟ್ಟಿರೋ ಪ್ರಯಾಣಿಕರು ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದೆಡೆ, ಮೆಟ್ರೋ ಪ್ರಯಾಣ ದರ ಏರಿಕೆ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ದರ ಏರಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿ ಬಿಜೆಪಿ ಆರೋಪಿಸಿದ್ದು, ಇಲ್ಲ ಅದು ನಮ್ಮ ಕೈನಲ್ಲಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಇನ್ನು ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ ಏರಿಕೆಯಾಗಿರುವ ಮೆಟ್ರೋ ದರವನ್ನು ಹೇಗೆ ಇಳಿಕೆ ಮಾಡಬಹುದು ಎಂದು ಐಡಿಯಾ ಕೊಟ್ಟಿದ್ದಾರೆ.

ಮೆಟ್ರೋ ದರ ಇಳಿಕೆಗೆ ಇದೊಂದೇ ಮಾರ್ಗ: ಸಿದ್ದರಾಮಯ್ಯಗೆ ಮಹತ್ವದ ಸಲಹೆ ನೀಡಿದ ತೇಜಸ್ವಿ ಸೂರ್ಯ
Namma Metro
ಹರೀಶ್ ಜಿ.ಆರ್​.
| Updated By: ರಮೇಶ್ ಬಿ. ಜವಳಗೇರಾ|

Updated on: Feb 12, 2025 | 5:21 PM

Share

ನವದೆಹಲು/ಬೆಂಗಳೂರು (ಫೆಬ್ರವರಿ 12): ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋಗಿಂತ ಆಟೋ, ಬೈಕ್​ನಲ್ಲೇ ಹೋವುದು ಬೆಸ್ಟ್​ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಇನ್ನು ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಶುರುವಾಗಿದೆ. ಇನ್ನು ದರ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ ಎಂದು ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಅಲ್ಲದೇ ದರ ಇಳಿಕೆ ಬಗ್ಗೆ ರಾಜ್ಯ ಸರ್ಕಾರಕ್ಕೊಂದು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಇದರಿಂದ ಮಾತ್ರ ದರ ಇಳಿಕೆ ಮಾತ್ರ ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಏಕಾಏಕಿ ಮೆಟ್ರೋ ದರವನ್ನು 50%,100% ಏರಿಕೆಯಾಗಿದೆ. ಮೆಟ್ರೋ ದರಗಳು ಏರಿಕೆಯಾಗಿ ಜನರಿಗೆ ಸಮಸ್ಯೆಯಾಗಿದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಇನ್ನು ತೊಂದರೆಯಾಗಿದೆ. ಸಂಬಳದ ದೊಡ್ಡ ಭಾಗ ಈಗ ಮೆಟ್ರೋ ಗೆ ಕೊಡಬೇಕಾಗಿದ್ದು, ಅಧಿಕಾರಿಗಳಿಂದ ಈ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಅಧಿಕಾರಗಳು ದರ ನಿಗಧಿ ಮಾಡಲು ಸಮಿತಿ ರಚಿಸುವ ಪ್ರಕ್ರಿಯೆ ಶುರು ಮಾಡಿದರು ಎಂದರು.

ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಮಾಡಿದ್ಯಾರು? ಎಳೆ ಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ

ಮೆಟ್ರೋ ಕಂಪನಿ ಮತ್ತು ರಾಜ್ಯ ಸರ್ಕಾರ ದರ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಅದರ ಆಧಾರದ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡುತ್ತೆ. ಸಮಿತಿ ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ನಿಂದ ಮಾಹಿತಿ ಪಡೆದು ಪರಿಷ್ಕೃತ ದರ ಪಟ್ಟಿ ನಿಗದಿ ಮಾಡುತ್ತೆ. ಸಮಿತಿ ಪರಿಷ್ಕರಣೆಯನ್ನು ಅನುಷ್ಠಾನ ಮಾಡಬೇಕು ಎಂದು ಕಾನೂನು ಹೇಳುತ್ತೆ. ನಿನ್ನೆ (ಫೆಬ್ರವರಿ 11) ಈ ಬಗ್ಗೆ ನಾನು ಲೋಕಸಭೆಯಲ್ಲಿ ಮಾತನಾಡಿದೆ ಎಂದು ಹೇಳಿದರು.

ಟ್ರಾಫಿಕ್ ಸಮಸ್ಯೆಗೆ ಜನರು ಮೆಟ್ರೋ ಬಳಸುತ್ತಾರೆ. ಆದರೆ ಈ ಪರಿ ಪ್ರಮಾಣದಲ್ಲಿ ದರ ಏರಿಸಿದರೆ ಜನರು ಬೈಕ್‌ ನಲ್ಲಿ ಹೋಗುತ್ತಾರೆ. ಸಾರ್ವಜನಿಕ ಸಾರಿಗೆ ಪ್ರೊತ್ಸಾಹ ಮಾಡಬೇಕಿತ್ತು ಇದು ಸರ್ಕಾರದ ಕರ್ತವ್ಯ. ಆದರೆ ಇದು ಕೇಂದ್ರ ಸರ್ಕಾರದ ಮಾಡಿದೆ ಎಂದು ಸಿಎಂ ಹೇಳಿದ್ದಾರೆ. ಆದ್ರೆ, ದರ ಪರಿಷ್ಕರಣೆಗೆ ಪತ್ರ ಬರೆದಿದ್ದೆ ರಾಜ್ಯ ಸರ್ಕಾರ. ಇದನ್ನು ಅವರು ಹೇಳುತ್ತಿಲ್ಲ ಎಂದು ಕಿಡಿಕಾರಿದರು.

ಬರೀ ಮೆಟ್ರೋ ಅಲ್ಲ ನೊಂದಣಿ ಶುಲ್ಕ, ವಾಹನ ನೋಂದಣಿ, ಆಸ್ಪತ್ರೆ ಸೇವಾ ಶುಲ್ಕ, ಕಾಲೇಜು ಫಿ, ಎಲೆಕ್ಟ್ರೀಕ್ ವಾಹನಗಳ ಮೇಲೂ ತೆರಿಗೆ ಹಾಕಿದೆ. ಮೆಟ್ರೋ ದರ ಏರಿಸಿ ಎಂದು ಪತ್ರ ಬರೆದಿದ್ದು ರಾಜ್ಯ ಸರ್ಕಾರ. ಈಗ ಕೇಂದ್ರ ಸರ್ಕಾರದ ಆರೋಪ ಮಾಡಲಾಗುತ್ತಿದೆ. ಇದು ಆರೋಪದ ಸಮಯ ಅಲ್ಲ, ಸಮಸ್ಯೆ ಬಗೆಹರಿಸಬೇಕು. ನಾನು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ದೇಶದಲ್ಲೇ ಬೆಂಗಳೂರು ದುಬಾರಿ ಮೆಟ್ರೋ ಆಗಿದೆ. ಟ್ರಾಫಿಕ್ ಸಮಸ್ಯೆ ಗೆ ಪರ್ಯಾಯ ಮೆಟ್ರೋ ಮಾತ್ರ ಹೀಗಾಗಿ ಬೆಲೆ ಏರಿಕೆ ಸೂಕ್ತ ಅಲ್ಲ. ಪ್ರಯಾಣಿಕರ ಸಂಖ್ಯೆ ಕುಸಿತದ ಬಗ್ಗೆಯೂ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಪತ್ರ ಬರೆದ್ರೆ ದರ ಇಳಿಕೆ ಮಾತ್ರ ಸಾಧ್ಯ

ರಾಜ್ಯ ಸರ್ಕಾರ ಮತ್ತೊಮ್ಮೆ ಪತ್ರ ಬರೆದರೆ ಮತ್ತೊಮ್ಮೆ ದರ ಪರಿಷ್ಕರಣೆ ಮಾಡಲು ಮನವಿ ಮಾಡಿದರೆ ಮತ್ತೊಮ್ಮೆ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದಿಂದ ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಇದರಿಂದ ಮಾತ್ರ ದರ ಇಳಿಕೆ ಮಾತ್ರ ಸಾಧ್ಯ . ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಹಿಂದಿನ ಸಮಿತಿ ಯಾವ ಆಧಾರದ ಮೇಲೆ ದರ ಪರಿಷ್ಕರಣೆ ಮಾಡಿದೆ ಗೊತ್ತಿಲ್ಲ. ಸಿಂಗಾಪುರ ಸೇರಿ ಹಲವು ವಿದೇಶಿ ಪ್ರವಾಸವನ್ನು ಮಾಡಿದೆ. ವಿದೇಶದ ಗುಣಮಟ್ಟದ ದರವನ್ನು ಇಲ್ಲಿ ನಿಗದಿಪಡಿಸಿದೆ. ಈಗಾಗಿರುವ ದರ ಪರಿಷ್ಕರಣೆಯನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಮೆಟ್ರೋ ನಿಯಮಗಳಲ್ಲಿ ತಡೆ ಹಿಡಿಯಲು ಸಾಧ್ಯವಿಲ್ಲ. ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು, ಆದರೆ ಕೋರ್ಟ್ ಮಧ್ಯಪ್ರವೇಶ ಮಾಡುತ್ತಾ ಗೊತ್ತಿಲ್ಲ. ಅದರ ಬದಲು ಸಿಎಂ ಇವತ್ತೆ ಪತ್ರ ಬರೆಯಲಿ. ನಾಳೆಯೇ ಸಮಿತಿ ರಚನೆಯಾಗಲಿದೆ ಎಂದು ಹೇಳಿದರು.