AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಲಾ, ಓಬರ್ ಆಟೊ ರೈಡ್​ಗೆ ಶೇ 5 ತೆರಿಗೆ: ಸಾರಿಗೆ ಇಲಾಖೆ ನಿರ್ಧಾರದ ಬಗ್ಗೆ ಆಟೊ ಚಾಲಕರ ಅಸಮಾಧಾನ

‘ಕರ್ನಾಟಕ ಸರ್ಕಾರವು ಹೈಕೋರ್ಟ್​ ಎದುರು ಸರಿಯಾಗಿ ವಾದ ಮಂಡಿಸುತ್ತಿಲ್ಲ’ ಎಂದು ಓಲಾ-ಊಬರ್ ಚಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಓಲಾ, ಓಬರ್ ಆಟೊ ರೈಡ್​ಗೆ ಶೇ 5 ತೆರಿಗೆ: ಸಾರಿಗೆ ಇಲಾಖೆ ನಿರ್ಧಾರದ ಬಗ್ಗೆ ಆಟೊ ಚಾಲಕರ ಅಸಮಾಧಾನ
ಪ್ರಾನಿಧಿಕ ಚಿತ್ರImage Credit source: Deccan Chronicle
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 28, 2022 | 11:15 AM

Share

ಬೆಂಗಳೂರು: ಪ್ರತಿ ಆಟೊರಿಕ್ಷಾ ರೈಡ್​ಗೆ ಶೇ 5ರ ಜಿಎಸ್​ಟಿ (ಸರಕು ಸೇವಾ ಸುಂಕ) ವಿಧಿಸುವ ನಿರ್ಧಾರದ ಬಗ್ಗೆ ‘ಓಲಾ ಊಬರ್​ ಚಾಲಕರು ಮತ್ತು ಮಾಲೀಕರ ಒಕ್ಕೂಟ’ (The Ola Uber Drivers and Owners Association – OUDOA) ಬೇಸರ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರವು ಆ್ಯಪ್​ಗಳ ಮೂಲಕ ಆಟೊಗಳನ್ನು ಬುಕ್ ಮಾಡಿ ಸಂಚರಿಸುವ ಪ್ರಯಾಣಿಕರ ಪ್ರತಿ ಸವಾರಿಗೆ (ರೈಡ್​) ಶೇ 5ರ ಸೇವಾ ಶುಲ್ಕ ಮತ್ತು ಜಿಎಸ್​ಟಿ ವಿಧಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿತ್ತು. ಕಳೆದ ನವೆಂಬರ್ 25ರಂದು ಈ ಆದೇಶ ಹೊರಬಿದ್ದಿತ್ತು. ಇದು ಚಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷ, ‘ಕರ್ನಾಟಕ ಸರ್ಕಾರವು ಹೈಕೋರ್ಟ್​ ಎದುರು ಸರಿಯಾಗಿ ವಾದ ಮಂಡಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರವು ‘ಕರ್ನಾಟಕ ಆನ್​ ಡಿಮಾಂಡ್ ಟ್ರಾನ್ಸ್​ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್​’ ನಿಯಮಗಳಿಗೆ ತಿದ್ದುಪಡಿ ತರಬೇಕಿತ್ತು. ಏಕೆಂದರೆ ಈ ನಿಯಮಗಳಲ್ಲಿ ಆಟೊರಿಕ್ಷಾಗಳ ಉಲ್ಲೇಖವೇ ಇಲ್ಲ’ ಎಂದು ಪಾಷಾ ಪ್ರತಿಕ್ರಿಯಿಸಿದರು. ‘ಅವರು (ಸಾರಿಗೆ ಇಲಾಖೆ) ನ್ಯಾಯಾಲಯಕ್ಕೆ ಸರಿಯಾಗಿ ಮಾಹಿತಿ ನೀಡಿದ್ದರೆ, ನಿಯಮಗಳಿಗೆ ತಿದ್ದುಪಡಿ ತರಲು ನ್ಯಾಯಾಲಯವು ಸೂಚಿಸುತ್ತಿತ್ತು’ ಎಂದು ಅವರು ಹೇಳಿದರು.

ನಿರ್ದೇಶನಗಳನ್ನು ಹೊರಡಿಸುವಾಗ ಸಾರಿಗೆ ಇಲಾಖೆಯು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವನ್ನು (Regional Transport Authority) ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪ್ರಾಧಿಕಾರದ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯೂ ಆಗಿದ್ದಾರೆ. ಅವರ ಅಭಿಪ್ರಾಯ ಕೇಳಿದ್ದರೆ ಅವರು ಪರಿಸ್ಥಿತಿಯ ಬಗ್ಗೆ ವಿವರಿಸುತ್ತಿದ್ದರು ಎಂದು ಪಾಷಾ ತಿಳಿಸಿದರು. ಹಾಲಿ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಪ್ರತಿ ಕಿಲೋಮೀಟರ್ ಸಂಚಾರಕ್ಕೆ ಆಟೊಗೆ ₹ 15 ನಿಗದಿಪಡಿಸಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಶೇ 5ರ ಜಿಎಸ್​ಟಿ ಸೇರಿಸಿದರೆ ಅದು 80 ಪೈಸೆ ಆಗುತ್ತದೆ. ಮುಂದಿನ ದಿನಗಳಲ್ಲಿ ಅಕ್ರಿಗೇಟರ್ ಕಂಪನಿಗಳು ಈ ಮೊತ್ತವನ್ನು ಹೆಚ್ಚಿಸಲು ಮಾರ್ಗಗಳನ್ನು ಆಲೋಚಿಸಬಹುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಪ್ರಸ್ತುತ ಆಟೊಗಳಿಗೆ ಕನಿಷ್ಠ ಬಾಡಿಗೆಯಾಗಿ ₹ 30 ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಲೋಮೀಟರ್​ಗೆ ₹ 15ರ ಬಾಡಿಗೆ ಇದೆ. ತಮ್ಮ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಆಟೊ ಚಾಲಕ ತಿಮ್ಮಪ್ಪ, ‘ಈಗ ನಿಗದಿಪಡಿಸಿರುವ ದರ ತೀರಾ ಹೆಚ್ಚಾಗಿ ಎಂದು ಅನ್ನಿಸುತ್ತಿಲ್ಲ. ಆದರೆ ಅಗ್ರಿಗೇಟರ್​ ಕಂಪನಿಗಳು ಹೆಚ್ಚಿನ ದರ ಪಡೆಯಲು ಮುಂದೆ ಏನು ಮಾಡಲಿವೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದರು. ‘ಓಲಾ-ಊಬರ್ ಕಂಪನಿಗಳು ಜನರಿಗೆ ವಿಪರೀತ ಹೆಚ್ಚು ಎನ್ನುವಷ್ಟು ದರ ನಿಗದಿಪಡಿಸುತ್ತಿದ್ದ ಕಾರಣ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು. ಹೊಸ ಅದೇಶವು ಜನರ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದು ನಂತರದ ದಿನಗಳಲ್ಲಿ ತಿಳಿದುಬರಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೊಬ್ಬ ಆಟೊ ಚಾಲಕ ಎನ್.ವೆಂಕಟೇಶ್ ಮಾತನಾಡಿ, ‘ಈ ಕಂಪನಿಗಳು ಪ್ರಯಾಣಿಕರಿಗೆ ಎಷ್ಟರಮಟ್ಟಿಗೆ ಶುಲ್ಕ ವಿಧಿಸುತ್ತವೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ’ ಎಂದರು. ಓಲಾ ಕ್ಯಾಬ್ಸ್​​ನ ಸಾರ್ವಜನಿಕ ಸಂಪರ್ಕ ವಿಭಾಗಕ್ಕೆ ಈ ಕುರಿತು ಪ್ರತಿಕ್ರಿಯಿಸುವಂತೆ ಕೋರಲಾಯಿತಾದರೂ, ಅವರು ಒಪ್ಪಲಿಲ್ಲ.

ಇಂದು ಹೈಕೋರ್ಟ್ ವಿಚಾರಣೆ

ಓಲಾ, ಊಬರ್​ ಕಂಪನಿಗಳ ಮೂಲಕ ಕಾರ್ಯನಿರ್ವಹಿಸುವ ಆಟೊಗಳಿಗೆ ದರ ನಿಗದಿ ವಿವಾದ ಇಂದು ಅಂತಿಮಘಟ್ಟಕ್ಕೆ ತಲುಪುವ ಸಾಧ್ಯತೆಯಿದೆ. ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ನಡೆಯಲಿದ್ದು, ರಾಜ್ಯ ಸಾರಿಗೆ ಇಲಾಖೆ ನಿಗದಿಪಡಿಸಿರುವ ದರದ ಬಗ್ಗೆ ಹೈಕೋರ್ಟ್​ ಪ್ರತಿಕ್ರಿಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಶುಕ್ರವಾರವೇ ಸಾರಿಗೆ ಇಲಾಖೆಯು ಓಲಾ, ಊಬರ್​ ಆಟೊ ಸಂಚಾರಕ್ಕೆ ದರ ನಿಗದಿಪಡಿಸಿದ್ದು, ಈ ಬಗ್ಗೆ ಹೈಕೋರ್ಟ್​ಗೆ ಇಂದು ಅಧಿಕೃತವಾಗಿ ಮಾಹಿತಿ ನೀಡಲಿದೆ.

Published On - 11:15 am, Mon, 28 November 22