ಒಮಿಕ್ರಾನ್ ತಡೆಗೆ ಕರ್ನಾಟಕ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ನೀವು ತಿಳಿಯಲೇಬೇಕಾದ 20 ಅಂಶಗಳಿವು
ಶಾಲಾ-ಕಾಲೇಜುಗಳಲ್ಲಿ 2022ರ ಜ.15ರವರೆಗೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು.
ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೊರೊನಾ ನಿಯಂತ್ರಣಕ್ಕೆ ಎಚ್ಚರಿಕೆ, ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಷನ್ (ತಪಾಸಣೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಲಸಿಕಾಕರಣ) ಪಂಚಸೂತ್ರಗಳನ್ನು ಬಿಡುಗಡೆ ಮಾಡಿದೆ. ಮದುವೆ, ಸಭೆ, ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಶಾಲಾ-ಕಾಲೇಜುಗಳಲ್ಲಿ 2022ರ ಜ.15ರವರೆಗೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಆರೋಗ್ಯ ಕಾರ್ಯಕರ್ತರು, 65 ವರ್ಷ ಮೇಲ್ಪಟ್ಟವರು, ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಟೆಸ್ಟಿಂಗ್ ಕಡ್ಡಾಯ. ಮಾಲ್, ಚಿತ್ರಮಂದಿರ ಪ್ರವೇಶಕ್ಕೆ 2 ಡೋಸ್ ಕಡ್ಡಾಯ. ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶಗಳಲ್ಲಿ ₹ 250, ಗ್ರಾಮೀಣ ಭಾಗದಲ್ಲಿ ₹ 100 ದಂಡ ವಿಧಿಸಲಾಗುವುದು. ಮೈಕ್ರೋ ಕಂಟೇನ್ಮೆಂಟ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ. ಮಾರ್ಗಸೂಚಿ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಸಭೆಯ ವಿವರ ಮತ್ತು ಮಾರ್ಗಸೂಚಿಯ ಪ್ರಮುಖ ಅಂಶಗಳು 1) ಓಮಿಕ್ರಾನ್ ರೂಪಾಂತರಿ ತಳಿಯ ವೈರಸ್ ನಿಂದ ಎರಡು ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಇಡೀ ವಿಶ್ವದಲ್ಲಿ ಸುಮಾರು 400 ಪ್ರಕರಣಗಳು ಈ ವರೆಗೆ ವರದಿಯಾಗಿದೆ. 2) ಅಧಿಕೃತವಾಗಿ ಈ ಪ್ರಕರಣಗಳ ಕುರಿತು ಯಾವುದೇ ಅಧ್ಯಯನ ವರದಿ ಬಂದಿಲ್ಲ. ಆದರೆ ಅನೌಪಚಾರಿಕವಾಗಿ ದೊರೆತ ಮಾಹಿತಿಯ ಪ್ರಕಾರ ಈ ವೈರಸ್ ಸೋಂಕು ಹೆಚ್ಚು ತೀವ್ರ ಪರಿಣಾಮ ಬೀರಿಲ್ಲ. ಸೋಂಕಿತರಲ್ಲಿ ಲಘು ಲಕ್ಷಣಗಳು ಕಂಡು ಬಂದಿವೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ. 3) ಈಗ ವರದಿಯಾಗಿರುವ ಎರಡೂ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೆ ಸೂಚನೆ. 4) ಭಾರತ ಸರ್ಕಾರಕ್ಕೆ ಪತ್ರ ಬರೆದು, ಎನ್ಸಿಬಿಎಸ್ ಪ್ರಯೋಗಾಲಯದ ವಿವರವಾದ ವರದಿ ಒದಗಿಸುವಂತೆ ಮನವಿ ಮಾಡಲು ಸೂಚನೆ 5) ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗೆ ಅಧಿಕಾರಿಗಳಿಗೆ ಸೂಚನೆ 6) ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೇಟಿವ್ ವರದಿ ಬಂದ ನಂತರವೇ ಹೊರಗೆ ಕಳುಹಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಏರ್ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸಲು ಸೂಚನೆ 7) ಒಮಿಕ್ರಾನ್ ಜೊತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಸ್ ಸೋಂಕಿನ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಲು ಸೂಚನೆ 8) ಸಿನಿಮಾ, ಮಾಲ್ಗಳಿಗೆ ಭೇಟಿ ನೀಡುವವರಿಗೆ, ಶಾಲೆಗೆ ಹಾಜರಾಗುವ ಮಕ್ಕಳ ಪೋಷಕರಿಗೆ ಲಸಿಕೆ ಪಡೆಯುವುದು ಕಡ್ಡಾಯ 9) ಸರ್ಕಾರಿ ನೌಕರರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ 10) ನರ್ಸಿಂಗ್, ಅರೆವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಸಂಪೂರ್ಣ ಟೆಸ್ಟಿಂಗ್. 65 ವರ್ಷ ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಪರೀಕ್ಷೆ 11) ಶಾಲೆ, ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ 12) ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆ 500ಕ್ಕೆ ಸೀಮಿತ 13) ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುವುದು. ಅದಾಗ್ಯೂ ಶಾಲೆಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ 14) ಪರೀಕ್ಷಾ ಸಾಮರ್ಥ್ಯ ಹಾಗೂ ಪರೀಕ್ಷಾ ಪ್ರಮಾಣದ ಗುರಿ ಹೆಚ್ಚಿಸಲಾಗುವುದು. 1 ಲಕ್ಷ ಪರೀಕ್ಷೆಗಳನ್ನು ನಿರ್ವಹಿಸುವಷ್ಟು ಸಾಮರ್ಥ್ಯ ಬೆಳೆಸಿಕೊಳ್ಳಲು ಸೂಚಿಸಲಾಗಿದೆ. ವಿಶೇಷವಾಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಹೆಚ್ಚಿಸಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ತೀರ್ಮಾನಿಸಲಾಯಿತು 15) ಆರೋಗ್ಯ ಇಲಾಖೆ ಚಿಕಿತ್ಸಾ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿಕೊಳ್ಳಬೇಕು. ಆಕ್ಸಿಜನೇಟೆಡ್ ಬೆಡ್, ಆಕ್ಸಿಜನ್ ಪ್ಲಾಂಟ್ಗಳನ್ನು ಸಜ್ಜುಗೊಳಿಸಲು ಸೂಚನೆ 16) ಆಕ್ಸಿಜನ್ ಲಭ್ಯತೆ, ಸಾಗಾಣಿಕೆ, ಪೂರೈಕೆ ಜಾಲ ಜಾಗೃತಗೊಳಿಸಲು ಸೂಚನೆ 17) ಔಷಧಗಳ ಲಭ್ಯತೆ ಖಾತರಿಪಡಿಸಿಕೊಳ್ಳಲು ಆದೇಶ 18) ಸಂಪರ್ಕಿತರ ಪತ್ತೆಯ ಪ್ರಮಾಣ ಹೆಚ್ಚಿಸಲು ಸೂಚನೆ 19) ರಾಜ್ಯಾದ್ಯಂತ ನಿಯಂತ್ರಣ ಕೊಠಡಿ ಪ್ರಾರಂಭಿಸಲು ನಿರ್ಧಾರ 20) ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಒಮಿಕ್ರಾನ್ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುಧ್ಯ ಕಂಡು ಬಂದಿರುವ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಹೈ ಗ್ರೌಂಡ್ ಪೊಲೀಸರಿಗೆ ಸೂಚನೆ.
ಇದನ್ನೂ ಓದಿ: ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಪಾಸಿಟಿವ್; ಮನೆಗಳನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ ಬಿಬಿಎಂಪಿ ಇದನ್ನೂ ಓದಿ: Omicron: ಒಮಿಕ್ರಾನ್ ನಿರ್ವಹಣೆ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ
Published On - 5:21 pm, Fri, 3 December 21