ಬೆಂಗಳೂರು: ಇಡೀ ಜಗತ್ತನ್ನೇ ಕಾಡಿದ, ಕಂಗೆಡಿಸಿದ, ಜನ ಜೀವನವನ್ನೇ ಬುಡಮೇಲಾಗಿಸಿದ ಕೊರೊನಾ ವೈರಸ್ ಅಟ್ಟಹಾಸದ ನೆನಪು ಇನ್ನೂ ಹಸಿ ಹಸಿಯಾಗಿಯೇ ಇದೆ. ಕೊರೊನಾ ದಾಳಿಗೆ ಬಲಿಯಾದವರ ಮನೆ ಮಂದಿ ಇನ್ನೂ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ. ಕೊರೊನಾ ಕೊಟ್ಟ ಹೊಡೆತದಿಂದ ಜನಸಾಮಾನ್ಯರು ಈಗಷ್ಟೇ ಚೇತರಿಕೆಯ ಹಾದಿಯಲ್ಲಿದ್ದಾರೆ. ಆದ್ರೀಗ, ಕೊರೊನಾ ಮತ್ತೊಂದು ಅವತಾರ ತಾಳಿ ಜಗತ್ತನ್ನೇ ಕಪಿಮುಷ್ಠಿಯಲ್ಲಿಟ್ಟುಕೊಳ್ಳೋಕೆ ಹೊಂಚು ಹಾಕಿ ಕುಳಿತಿದೆ.
ಸದ್ಯ ಆಫ್ರಿಕಾ ದೇಶಗಳಲ್ಲಿ ಹರಡುತ್ತಿರೋ ಒಮಿಕ್ರಾನ್ ಎಲ್ಲಿ ಭಾರತಕ್ಕೂ ಕಾಲಿಟ್ಟು ಜೀವ ಹಿಂಡುತ್ತೋ ಅನ್ನೋ ಭೀತಿ ಶುರುವಾಗಿದೆ. ಅಲ್ಲದೆ ತಜ್ಞರು ಕೂಡ ಇದು ಭಾರಿ ಡೇಂಜರಸ್ ವೈರಸ್ ಅಂದಿರೋದು ಇನ್ನೂ ಆತಂಕಕ್ಕೆ ಕಾರಣವಾಗಿದೆ. ರಾಜ್ಯಕ್ಕೆ ಮೂರನೇ ಅಲೆಯ ಆತಂಕ ಶುರುವಾಗಿದೆ.
ಕರ್ನಾಟಕಕ್ಕೆ ಕಂಟಕವಾಗುತ್ತಾ ಡಿಸೆಂಬರ್?
ತಜ್ಞರು ಈ ಹಿಂದೆಯೇ ಡಿಸೆಂಬರ್ನಲ್ಲಿ ಕೊರೊನಾ 3ನೇ ಅಲೆ ಬರುತ್ತೆ ಎಂದು ಅಚ್ಚರಿಕೆಯ ಗಂಟೆ ಬಾರಿಸಿದ್ದರು. ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಮೂರನೇ ಅಲೆ ಅಂತ ಎಚ್ಚರಿಕೆ ನೀಡಿದ್ದರು. ಕಳೆದ ಕೆಲ ದಿನಗಳಲ್ಲಿ ನಡೀತಿರೋ ಬೆಳವಣಿಗೆಗಳನ್ನ ನೋಡಿದ್ರೆ ಅದ್ಯಾಕೊ ಕೊರೊನಾ ಮತ್ತೆ ಕಣ್ಣು ಬಿಡ್ತಿದ್ಯಾ ಅನ್ನೋ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಕೊರೊನಾ ಕೇಸ್ಗಳ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗ್ತಿದೆ. ಕಳೆದ ಒಂದು ವಾರದಿಂದ 250 -280 ಅಸುಪಾಸಿನಲ್ಲಿದ್ದ ಕೇಸ್ಗಳ ಸಂಖ್ಯೆ ನಿತ್ಯ 320-330 ಅಸುಪಾಸಿಗೆ ಏರಿಕೆ ಕಾಣುತ್ತಿವೆ. ಸಾವಿರಕ್ಕಿಂತ ಹೆಚ್ಚು ಕೇಸ್ಗಳು ಏರಿಕೆಯಾದ್ರೆ ಮೂರನೇ ಅಲೆ ಆರಂಭ ಎಂದು ತಜ್ಞರು ಖಚಿತವಾಗಿ ಎಚ್ಚರಿಕೆ ನೀಡಿದ್ದಾರೆ. ಸಾಲದ್ದಕ್ಕೆ ಈ ಒಮಿಕ್ರಾನ್ ಅನ್ನೋ ಕ್ರಿಮಿಯ ಹುಟ್ಟು ಬೇರೆ. ಹೀಗಾಗಿ ಡಿಸೆಂಬರ್ ತಿಂಗಳು ಕಂಟಕವಾಗುತ್ತಾ ಅನ್ನೋ ಅನುಮಾನ ಕಾಡ್ತಿದೆ.
ನ್ಯೂ ಇಯರ್ ಸಂಭ್ರಮಕ್ಕೆ ಪ್ರತ್ಯೇಕ ರೂಲ್ಸ್
ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಗೆ ಹೊಸ ರೂಲ್ಸ್ ಜಾರಿ ತರಲು ಸರ್ಕಾರ ಚಿಂತಿಸುತ್ತಿದೆ. ಅದರಲ್ಲೂ ಕ್ರಿಸ್‌ಮಸ್‌ಗಿಂತ ಹೆಚ್ಚು ಹೊಸವರ್ಷ ಆಚರಣೆ ಕಡೆ ಗಮನ ನೀಡಲು ಸರ್ಕಾರ ನಿರ್ಧರಿಸಿದೆ. ಪಬ್‌ಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಗೆ ಚಿಂತಿಸುತ್ತಿದ್ದು, ಸೋಂಕು ಏರಿಕೆಯಾದ್ರೆ ಹೊಸ ವರ್ಷಾಚರಣೆಗೆ ಅವಕಾಶ ನೀಡುವುದು ಅನುಮಾನವಾಗಿದೆ. ಈ ಸಂಬಂಧ ಚರ್ಚಿಸಲು ನಾಳೆ ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಜೊತೆ ಸಭೆ ಮಾಡಲಿದ್ದಾರೆ.
ಮಾಸ್ಕ್ ಧರಿಸದೆ ಓಡಾಡುವವರ ಮೇಲೆ ಖಾಕಿ ಕಣ್ಗಾವಲು
ಕೊವಿಡ್ ರೂಪಾಂತರಿ ‘ಒಮಿಕ್ರಾನ್’ ವೈರಸ್ ಆತಂಕ ಹಿನ್ನೆಲೆ ರಾಜ್ಯದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮತ್ತೆ ಕಡ್ಡಾಯಗೊಳಿಸಲಾಗಿದೆ. ಮದುವೆ, ಸಮಾರಂಭ, ಕಾಲೇಜು, ಮಾಲ್, ಥಿಯೇಟರ್ ಹೀಗೆ ಹೆಚ್ಚು ಜನ ಸೇರುವ ಕಡೆ ಮಾಸ್ಕ್ ಧರಿಸಲೇಬೇಕು. ಬೆಂಗಳೂರಲ್ಲಿ ಮಾಸ್ಕ್ ಇಲ್ಲದೇ ಓಡಾಡೋರಿಗೆ ಇಂದಿನಿಂದ್ಲೇ ದಂಡ ಪ್ರಯೋಗ ಶುರುವಾಗಿದೆ. ನಗರದಲ್ಲಿ ಮಾರ್ಷಲ್ಗಳು ಮತ್ತೆ ಅಲರ್ಟ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಮತ್ತೆ ಮಾಸ್ಕ್ ಫೈನ್ ಹಾಕಲು ಶುರು ಮಾಡಿದ್ದಾರೆ.
ಇದನ್ನೂ ಓದಿ: Coronavirus: ಕೊರೊನಾದಿಂದ ಮೃತಪಟ್ಟ ಶವಗಳನ್ನು 15 ತಿಂಗಳ ಬಳಿಕ ಹೊರ ತೆಗೆದ ಆಸ್ಪತ್ರೆ ಸಿಬ್ಬಂದಿ
Published On - 8:13 am, Mon, 29 November 21