ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಡಿಸೆಂಬರ್ ತಿಂಗಳಲ್ಲಿ ಕಳುಹಿಸಿದ್ದ 232 ಆರ್ಟಿ-ಪಿಸಿಆರ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ವರದಿ ಇಲಾಖೆಯ ಕೈ ಸೇರಿದೆ. ಈ ವರದಿಯಲ್ಲಿ 232 ಮಾದರಿಗಳ ಪೈಕಿ 203 ಮಾದರಿಗಳಲ್ಲಿ ಕೋವಿಡ್ನ ಒಮಿಕ್ರಾನ್ ರೂಪಾಂತರದ ಹೊಸ ಎಕ್ಸ್ಬಿಬಿ (Omicron variant XBB) ಉಪವರ್ಗ ಪತ್ತೆಯಾಗಿದೆ. INSACOG (Indian SARS-CoV-2 Consortium on Genomics) ಇದನ್ನು ದೃಢಪಡಿಸಿದೆ. 26 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರ ಬಿಎ 2ನ ಉಪ-ಶ್ರೇಣಿಗಳನ್ನು ದೃಢಪಡಿಸಲಾಗಿದೆ ಎಂದು ವರದಿಗಳು ಬಹಿರಂಗಪಡಿಸಿವೆ. 2 ಮಾದರಿಗಳಲ್ಲಿ ಬಿಎ5 ದೃಢಪಟ್ಟಿದ್ದು, ಒಂದು ಮಾದರಿಯಲ್ಲಿ BA1.1.529 ಕಂಡುಬಂದಿದೆ.
BF.7 ವೈರಸ್ ಭೀತಿ ನಡುವೆಯೂ ಗುಜರಾತ್ ಬಳಿಕ ಕರ್ನಾಟಕದಲ್ಲೂ ಮೊದಲ ಒಮಿಕ್ರಾನ್ ಉಪತಳಿ XBB.1.5 ವೈರಸ್ ಜನವರಿ 4ರಂದು ಪತ್ತೆಯಾಗಿತ್ತು. ಚೀನಾ ಅಮೇರಿಕಾದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ ಕೊವಿಡ್ XBB 1.5 ದೇಶದಲ್ಲಿ ಮೊದಲ ಬಾರಿಗೆ ಗುಜರಾತ್ನಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಕರ್ನಾಟಕದಲ್ಲೂ ಪತ್ತೆಯಾಗಿದೆ. ಒಮಿಕ್ರಾನ್ ರೂಪಾಂತರಿ BF.7ಕ್ಕಿಂತ XBB.1.5 ರೂಪಾಂತರಿ ವೈರಸ್ ಅತಿವೇಗವಾಗಿ ಜನರಿಗೆ ಹರಡುವ ವೈರಸ್ ಆಗಿದೆ.
ಇದನ್ನೂ ಓದಿ: Omicron subvariant XBB.1.5: ವಿಶ್ವದಲ್ಲಿ ಹೆಚ್ಚುತ್ತಿದೆ XBB.1.5, WHO ಕಳವಳ; ಭಾರತದಲ್ಲಿ 0.01% ಕೋವಿಡ್ ಪಾಸಿಟಿವಿಟಿ
ರಾಜ್ಯದಲ್ಲಿ ಇಂದು ಒಟ್ಟು 23 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 9 ಕೋವಿಡ್ ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ 5 ಪ್ರಕರಣಗಳು ಪತ್ತೆಯಾದರೆ, ಗದಗ, ಹಾವೇರಿ, ಕೊಪ್ಪಳದಲ್ಲಿ ತಲಾ 2 ಪ್ರಕರಣಗಳು, ಬೆಳಗಾವಿ, ಕೊಡಗು, ಕೋಲಾರ ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಸದ್ಯ ರಾಜ್ಯದಲ್ಲಿ 146 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ನಿನ್ನೆ ರಾಜ್ಯದಲ್ಲಿ 34 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Sat, 14 January 23