ಬೆಂಗಳೂರು, ಅ.22: ಎರಡು ಕಾರುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಬೆಂಗಳೂರಿನ (Bengaluru) ಬಳ್ಳಾರಿ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಬೆಳಿಗ್ಗೆ 8.15 ರ ಸುಮಾರಿಗೆ ಬಿಳಿ ಮತ್ತು ಮರೂನ್ ಕಾರುಗಳ ನಡುವೆ ರೈತರ ಸಂತೆ ಬಳಿಯ ಮೇಲ್ಸೇತುವೆಯ ಮೇಲೆ ಅಪಘಾತ ಸಂಭವಿಸಿದೆ.
ಬಿಳಿ ಕಾರನ್ನು ಮೊಹಿದ್ ಓಡಿಸುತ್ತಿದ್ದ ಮತ್ತು 20-25 ವರ್ಷದೊಳಗಿನ ಮೂವರು ಈ ಕಾರಿನಲ್ಲಿದ್ದರು. ಎಲ್ಲರೂ ದೇವನಹಳ್ಳಿಯಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಮೋಹಿದ್ ಅವರು ಅತಿ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಅದರ ಮೇಲೆ ಹಾರಿ ಮತ್ತೊಂದು ಲೇನ್‌ನಲ್ಲಿದ್ದ ಮೆರೂನ್ ಕಾರಿಗೆ ಡಿಕ್ಕಿ ಹೊಡೆದಿದೆ.
“ಮೊಹಿದ್ ಕಳೆದ ರಾತ್ರಿ ನಡೆದ ಪಾರ್ಟಿಯಿಂದ ಹಿಂತಿರುಗುತ್ತಿದ್ದರು. ಚಾಲಕನು ತನ್ನ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ಮೀಡಿಯನ್‌ಗೆ ಡಿಕ್ಕಿ ಹೊಡೆದಿದ್ದು, ದುರದೃಷ್ಟವಶಾತ್ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ” ಎಂದು ಪೊಲೀಸರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಎಲ್‌ಟಿಟಿಇ ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಿದ ಬೆಂಗಳೂರಿನ ಎನ್ಐಎ
ಮೆರೂನ್ ಕಾರನ್ನು ನರೇಂದ್ರಬಾಬು (52) ಚಲಾಯಿಸುತ್ತಿದ್ದರು. ಇವರು ತಮ್ಮ ಪತ್ನಿ ಲಕ್ಷ್ಮಿ (42), ಅವರ ಪುತ್ರಿ ಇಂಚರ (17) ಮತ್ತು ಸಂಬಂಧಿ ಶೋಭಾ (42) ಅವರೊಂದಿಗೆ ವಿದ್ಯಾರಣ್ಯಪುರದ ತಮ್ಮ ಮನೆಯಿಂದ ನಂದಿ ಹಿಲ್ಸ್ ಕಡೆಗೆ ಹೋಗುತ್ತಿದ್ದರು. ಸಂಬಂಧಿಕರೊಂದಿಗೆ ಒಂದೇ ಸ್ಥಳಕ್ಕೆ ಹೋಗುತ್ತಿದ್ದ ಮೂರು ಕಾರುಗಳಲ್ಲಿ ಈ ಕಾರು ಕೂಡ ಒಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಮಾಡಿದೆ.
ಅಪಘಾತದಲ್ಲಿ ಬಿಳಿ ಬಣ್ಣದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಮೆರೂನ್ ಕಾರಿನ ಬಾನೆಟ್ಗೆ ಹಾನಿಯಾಗಿದೆ. ಮೊಹಿದ್ ಪಕ್ಕದಲ್ಲಿ ಕುಳಿತಿದ್ದ 20 ವರ್ಷದ ಜಯನಗರ ನಿವಾಸಿ ಶೇಖ್ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮೃತಪಟ್ಟಿರುವುದಾಗಿ ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೋಹಿದ್ ಅವರ ತಲೆಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇನ್ನಿಬ್ಬರು ಪ್ರಯಾಣಿಕರಾದ ಹುಸೇನ್ ಷರೀಫ್ ಮತ್ತು ಮೊಹಮ್ಮದ್ ಮಾಜ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ಮತ್ತು ಶೋಭಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಪತ್ನಿ ತಲೆಗೆ ತೀವ್ರ ಪೆಟ್ಟಾಗಿದೆ. ಮಗಳಿಗೆ ಬಲಗಾಲು ಮೂಳೆ ಮುರಿತವಾಗಿದೆ.
ಅಪಘಾತದ ಸ್ಥಳದಿಂದ ಕಾರುಗಳನ್ನು ತೆರವು ಮಾಡುವ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ, ಅಂದರೆ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತ ಸಂಬಂಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ (279, 337, 338, 304 ಎ) ಅಡಿಯಲ್ಲಿ ನರೇಂದ್ರ ಬಾಬು ಅವರು ಭಾನುವಾರ ಮಧ್ಯಾಹ್ನ ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ