‘ಹಿಜಾಬ್’ ಧರಿಸಿ ಪರೀಕ್ಷೆ ಬರೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ: ಹಿಂದೂಪರ ಸಂಘಟನೆಗಳ ಆಕ್ರೋಶ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಎ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿಯನ್ನು ನೀಡಿದೆ. ಇದೇ ತಿಂಗಳು ಅಕ್ಟೋಬರ್ 28 ಮತ್ತು ಅಕ್ಟೋಬರ್ 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಅಭ್ಯರ್ಥಿಗಳು ಹಾಜರಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಬೆಂಗಳೂರು, ಅ.23: ರಾಜ್ಯದಲ್ಲಿ ಮತ್ತೆ ಹಿಜಾಬ್ (Hijab) ದಂಗಲ್ ಸದ್ದು ಮಾಡ್ತಿದೆ. ಕಳೆದ ವರ್ಷ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವ ವಿಚಾರ ಕೋಮುಸಂಘರ್ಷಕ್ಕೆ ಕಾರಣವಾಗಿ ರಾಜ್ಯಾದ್ಯಂತ ಗಲಭೆಗೆ ಕಾರಣವಾಗಿತ್ತು. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ನಿಗಮ ಮಂಡಳಿಗಳ ಹುದ್ದೆಗಳ ಭರ್ತಿ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಬರಬಹುದು ಎಂದಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿವೆ.
ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ವಿಚಾರದಲ್ಲಿ ಸಾಕಷ್ಟು ಗಲಾಟೆಗಳು ನಡೆದಿದ್ದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ನಲ್ಲಿ ಹಿಜಾಬ್ ಧರಿಸಿ ಪಿಯು ಪರೀಕ್ಷೆ ನಡೆಸಲು ಅವಕಾಶ ಇಲ್ಲ ಅಂತಾ ಕೂಡಾ ಹೇಳಿತ್ತು. ಆದರೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಇಎ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿಯನ್ನು ನೀಡಿದೆ. ಇದೇ ತಿಂಗಳು ಅಕ್ಟೋಬರ್ 28 ಮತ್ತು ಅಕ್ಟೋಬರ್ 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಅಭ್ಯರ್ಥಿಗಳು ಹಾಜರಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡಿರುವ ಕೆಇಎ ಕೆಲವು ಷರತ್ತು ಹಾಕಿದೆ. ಪರೀಕ್ಷೆಗೆ ಅಭ್ಯರ್ಥಿಗಳು ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿರಬೇಕು. ಅವರನ್ನು ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ ಅಂತಾ ತಿಳಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಗಲಾಟೆ ತಪ್ಪಿಸಲು ಈ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿಯಾದ ರಮ್ಯಾ ತಿಳಿಸಿದ್ದಾರೆ.
ನೀಟ್ ಪರೀಕ್ಷೆಯನ್ನು ಹಿಜಾಬ್ ಧರಿಸಿ ಬರೆಯಲು ಅವಕಾಶವಿದೆ
ಇನ್ನು ಹಿಜಾಬ್ ಗೊಂದಲದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ. ಸುಧಾಕರ್ ಅವರು ಮಾತನಾಡಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯುವ ವಿಷಯದಲ್ಲಿ ಸಮಸ್ಯೆ ಸೃಷ್ಟಿ ಮಾಡಲೇಬೇಕು ಎಂಬವರಿಗೆ ನಾವು ಉತ್ತರ ಕೊಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸ್ವಾತಂತ್ರ್ಯ ದೃಷ್ಟಿಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಸಮಸ್ಯೆ ಸೃಷ್ಟಿ ಮಾಡಲು ಕೆಲವರು ಇರುತ್ತಾರೆ ಅವರನ್ನು ಕೇಳಿ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ ಎಂದರು.
ಇದನ್ನೂ ಓದಿ: ಇರಾನ್ ಮೆಟ್ರೋದಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ, ಕೋಮಾಗೆ ಜಾರಿದ ಬಾಲಕಿ
ಹಿಜಾಬ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಇರುವುದು ಕಾಲೇಜುಗಳಿಗೆ. ಈಗ ನಡೆಯುತ್ತಿರುವುದು ಬೋರ್ಡ್ ಪರೀಕ್ಷೆ. ನೀಟ್ ಪರೀಕ್ಷೆಯನ್ನು ಹಿಜಾಬ್ ಧರಿಸಿ ಬರೆಯಲು ಅವಕಾಶವಿದೆ. ನಮ್ಮ ಕೆಇಎ ನಡೆಸುತ್ತಿರುವ ಪರೀಕ್ಷೆಯಲ್ಲಿ ಒಂದು ಗಂಟೆ ಮುಂಚೆ ಬಂದು ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಿದ್ದೇವೆ. ಇದರಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ. ಕೆಲವರು ಬೇರೆ ಕಾರಣಗಳನ್ನು ಮುಂದಿಟ್ಟು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿರಬಹುದು. ಎಲ್ಲರಿಗೂ ಅವರ ಇಚ್ಛೆಯಂತೆ ಬಟ್ಟೆ ಧರಿಸುವ ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ಹಿಂದೂಪರ ಸಂಘಟನೆಗಳ ಆಕ್ರೋಶ
ಕಳೆದ ವರ್ಷ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವ ವಿಚಾರ ಕೋಮುಸಂಘರ್ಷಕ್ಕೆ ಕಾರಣವಾಗಿ ರಾಜ್ಯಾದ್ಯಂತ ಗಲಭೆಗೆ ಕಾರಣವಾಗಿತ್ತು.ಇದೀಗ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಿಂದೆಯೇ ಇದೇ ವಿಚಾರಕ್ಕೆ ಗಲಾಟೆಯಾಗಿತ್ತು. ರಾಜ್ಯಾದ್ಯಂತ ನಡೆದ ಕೋಮುಗಲಭೆಯಲ್ಲಿ ಕಲ್ಲು ತೂರಾಟ ನಡೆದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿತ್ತು. ಈಗ ಮತ್ತೆ ಹಿಜಾಬ್ ಅನುಮತಿ ಕೊಟ್ಟಿರುವುದು ಸರಿಯಲ್ಲ ಸರ್ಕಾರ ಇದನ್ನ ಕೂಡಲೇ ಹಿಂಪಡೆಯುವಂತೆ ಹಿಂದೂ ಜನಜಾಗೃತಿ ಸಂಘಟನೆ ಆಗ್ರಹಿಸಿದೆ.
ಒಟ್ನಲ್ಲಿ ತಣ್ಣಗಾಗಿದ್ದ ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು. ಹಿಜಾಬ್ ಗೆ ಕೊಟ್ಟಿರುವ ಅನುಮತಿ ವಾಪಾಸ್ ಪಡೆಯಬೇಕು. ಇಲ್ಲವಾದರೆ ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಅಂತ ಹಿಂದೂಪರ ಸಂಘಟನೆಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ. ಈಗ ರಾಜ್ಯದಲ್ಲಿ ಮತ್ತೊಂದು ಧರ್ಮದಂಗಲ್‌ಗೆ ಹಿಜಾಬ್ ಕಾರಣವಾಗುವ ಆಗುತ್ತಾ ಎಂಬ ಆತಂಕ ಮೂಡಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:54 am, Mon, 23 October 23