ಆನ್‌ಲೈನ್ ಬೆಟ್ಟಿಂಗ್ ಹಗರಣ: ಶಾಸಕ ವಿರೇಂದ್ರ ಪಪ್ಪಿಗೆ ಮತ್ತೆ ಸಂಕಷ್ಟ; ಇಡಿಯಿಂದ ಆಸ್ತಿ ಮುಟ್ಟುಗೋಲು
ಆನ್‌ಲೈನ್ ಬೆಟ್ಟಿಂಗ್ ಮತ್ತು ಹವಾಲಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಇತರರಿಗೆ ಸೇರಿದ 23.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿದೆ. ಇ.ಡಿ. ಅಧಿಕಾರಿಗಳು ವೀರೇಂದ್ರ ಪಪ್ಪಿ ಅವರಿಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಈ ಹಿಂದೆಯೂ ಜಪ್ತಿ ಮಾಡಿದ್ದರು.

ಬೆಂಗಳೂರು, ಅಕ್ಟೋಬರ್ 27: ಆನ್‌ಲೈನ್ ಬೆಟ್ಟಿಂಗ್ ಹಗರಣ ಸಂಬಂಧ ಚಿತ್ರದುರ್ಗ ಎಂಎಲ್ಎಗೆ ಮತ್ತೆ ಸಂಕಷ್ಟ ಎದುರಾಗಿದ್ದು, ವೀರೇಂದ್ರ ಪಪ್ಪಿ ಮತ್ತು ಇತರರಿಗೆ ಸೇರಿದ 23.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಗುಲ್ಷನ್ ಖಟ್ಟರ್, ನೇಹಾ ಟಂಡನ್‌ಗೆ ಸೇರಿದ ಆಸ್ತಿಗಳನ್ನೂ ಜಪ್ತಿ ಮಾಡಿದೆ. ಇದರಲ್ಲಿ 13.76 ಕೋಟಿ ಮೌಲ್ಯದ ಚರಾಸ್ತಿ, 9.58 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿವೆ. ಆ ಮೂಲಕ ಪ್ರಕರಣ ಸಂಬಂಧ ಈವರೆಗೆ ಇಡಿ 343 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಂತಾಗಿದ್ದು, ತನಿಖೆ ಮುಂದುವರಿದಿದೆ.
‘2,300 ಕೋಟಿಗೂ ಅಧಿಕ ಅಕ್ರಮ ಹಣ ವರ್ಗಾವಣೆ’
ಕಿಂಗ್ 567 ಸೇರಿದಂತೆ ವಿವಿಧ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ನಿರ್ವಹಣೆ, ಆನ್‌ಲೈನ್ ಬೆಟ್ಟಿಂಗ್ ಮೂಲಕ ಆಟಗಾರರಿಗೆ ವಂಚಿಸಿ ಹಣ ಸಂಗ್ರಹ, ಹವಾಲಾ ಮತ್ತು ವಿದೇಶಿ ಹಣ ವರ್ಗಾವಣೆ ಮಾರ್ಗಗಳ ಬಳಕೆ ಸೇರಿದಂತೆ ನಕಲಿ ಕಂಪನಿಗಳು, ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಶಂಕೆ ಹಿನ್ನೆಲೆ ದೇಶದ ವಿವಿಧ ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಹಿಂದೆ ಇಡಿ ದಾಳಿ ನಡೆಸಿತ್ತು. 2,300 ಕೋಟಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ನಡೆದಿರುವುದಾಗಿ ಇಡಿ ಮಾಹಿತಿ ನೀಡಿತ್ತು. ದಾಳಿ ವೇಳೆ ನಗದು, ಚಿನ್ನಾಭರಣ, ಐಷಾರಾಮಿ ವಾಹನಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಜೈಲಿಂದ ವೀರೇಂದ್ರ ಪಪ್ಪಿ ರಿಲೀಸ್: ಹೂವಿನ ಹಾರ ಹಾಕಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
2025ರ ಡಿ.30ರಂದು ಜೈಲಿಂದ ರಿಲೀಸ್ ಆಗಿದ್ದ ವೀರೇಂದ್ರ ಪಪ್ಪಿ
ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್ 23, 2025ರಂದು ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಬಂಧಿಸಿದ್ದರು. ಸುಮಾರು 4 ತಿಂಗಳ ನ್ಯಾಯಾಂಗ ಬಂಧನದ ನಂತರ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇದರ ಅನ್ವಯ ಡಿಸೆಂಬರ್ 30, 2025 ರಂದು ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಅವರು ರಿಲೀಸ್ ಆಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:50 pm, Tue, 27 October 26




