ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಬ್ಯಾನ್ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಲವು ಕಂಪನಿಗಳು ರಿಟ್ ಸಲ್ಲಿಸಿವೆ. ಕ್ರಿಮಿನಲ್ ಕೇಸ್ ಭೀತಿ ಎದುರಿಸುತ್ತಿದ್ದ ಕಂಪನಿಗಳಿಂದ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿವೆ. ಈ ಬಗ್ಗೆ ಹೈಕೋರ್ಟ್‌ಗೆ ಎಜಿ ಪ್ರಭುಲಿಂಗ್ ನಾವದಗಿ ಮನವಿ ಸಲ್ಲಿಸಿದ್ದು ಮಧ್ಯಂತರ ಆದೇಶ ಸಂಬಂಧ ಅ.27ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ರಾಜ್ಯದಲ್ಲಿ ಎಲ್ಲಾ ಬಗೆಯ ಆನ್ ಲೈನ್ ಗೇಮಿಂಗ್ ಗ್ಯಾಂಬ್ಲಿಂಗ್ ನಿಷೇಧಿಸುವ ರಾಜ್ಯ ಸರ್ಕಾರ ಆದೇಶವನ್ನು ಇದೀಗ ಕಂಪೆನಿಗಳು ಹೈಕೋರ್ಟ್ ನಲ್ಲಿ ಪ್ರಶ್ನಿಸಿವೆ. ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್, ಗ್ಯಾಲಕ್ಟಸ್ ಪೊನ್ ವೇರ್ ಟೆಕ್ನಾಲಜೀಸ್ ಸೇರಿದಂತೆ ಹಲವು ಕಂಪೆನಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ನಿರ್ಧಾರ ಸಂವಿಧಾನ ಬಾಹಿರ ಎಂದು ವಾದಿಸಿವೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಆದೇಶ ಹೊರಡಿಸಿದ್ದು ಇದರಿಂದ ತುಂಬಾ ನಷ್ಟವಾಗಿದೆ. ಅನಗತ್ಯವಾಗಿ ಪೊಲೀಸ್ ಕೇಸ್ ಎದುರಿಸುವಂತಾಗಿದೆ. ತನಿಖೆಯ ನೆಪದಲ್ಲಿ ಪೊಲೀಸರಿಂದ ತೊಂದರೆಯಾಗಬಾರದು. ಹೀಗಾಗಿ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದೂ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರಕ್ಕೆ ಆನ್ ಲೈನ್ ಗೇಮಿಂಗ್ ಮತ್ತು ಆನ್ ಲೈನ್ ಗ್ಯಾಂಬ್ಲಿಂಗ್ ಅನ್ನು ನಿಷೇಧಿಸುವ ಅಧಿಕಾರ ಇಲ್ಲ. ಹೀಗಾಗಿ ಸರ್ಕಾರದ ಆದೇಶ ರದ್ದುಪಡಿಸುವಂತೆ ಕಂಪನಿಗಳ ಪರ ಹಿರಿಯ ವಕೀಲ ಅರವಿಂದ್ ದಾತಾರ್, ಸಜನ್ ಪೂವಯ್ಯ, ಡಿಎಲ್ ಎನ್ ರಾವ್ ಸೇರಿ ಹಲವರು ವಾದ ಮಂಡಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ಆಕ್ಷೇಪ ಎತ್ತಿದ್ದು, ರಿಟ್ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ವಿವರವಾದ ವಿಚಾರಣೆ ಅಗತ್ಯವಿರುವುದರಿಂದ ಹೈಕೋರ್ಟ್ ವಿಚಾರಣೆಯನ್ನು ಅ. 27 ಕ್ಕೆ ಮುಂದೂಡಿದೆ. ಕಂಪೆನಿಗಳು ರಾಜ್ಯ ಸರ್ಕಾರದ ಆನ್ ಲೈನ್ ಗೇಮಿಂಗ್ ನಿರ್ಬಂಧ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆಯೂ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ಬಗ್ಗೆಯೂ ಹೈಕೋರ್ಟ್ ಅ.27 ರಂದು ತೀರ್ಮಾನಿಸಲಿದೆ.
ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಬ್ಯಾನ್ ಮಾಡಿದ ಸರ್ಕಾರ
ಆನ್‌ಲೈನ್ ಜೂಜುಕೋರರಿಗೆ ಸರ್ಕಾರ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ (Online gambling) ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಡ್ರೀಮ್ ಇಲೆವೆನ್ (Dream 11), ಪೇ ಟೀಂ ಫಸ್ಟ್ (PayTM first), ಗೇಮ್ಜಿ (Gamezy) ಆ್ಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ (Fantasy gamess) ಆಪ್ಗಳನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್ ಗೇಮ್, ಆನ್‌ಲೈನ್ ಜೂಜು, ಬೆಟ್ಟಿಂಗ್‌ಗೆ ನಿಷೇಧ ಹೇರಿತ್ತು. ಇದೀಗ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಜೂಜು ನಿಷೇಧದ ಆದೇಶ ಅಧಿಕೃತವಾಗಿ ಹೊರಬಿದ್ದಿದೆ.
ಇದನ್ನೂ ಓದಿ: ಆನ್‌ಲೈನ್ ಜೂಜು ನಿಯಂತ್ರಣಕ್ಕೆ ಸಂಬಂಧಿಸಿ ಹೈಕೋರ್ಟ್ನಲ್ಲಿ ಪಿಐಎಲ್ ವಿಚಾರಣೆ
Published On - 1:04 pm, Fri, 22 October 21