ಬೆಂಗಳೂರು, (ಜುಲೈ 15): ವಿಧಾನಸಭೆ ಅಧಿವೇಶನ ಅಲ್ಲದೇ ವಿಪಕ್ಷಗಳ ಸಭೆ(Opposition leaders meeting) ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಘಟಾನುಘಟಿ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೀಗಾಗಿ ಇಂದು ಮತ್ತು ನಾಳೆ (ಜುಲೈ 17, 18) ಬೆಂಗಳೂರಿನ ಹಲವೆಡೆ ವಾಹನಗಳ ಸಂಚಾರ (Bengaluru Traffic advisory) ಮಾರ್ಗ ಬದಲಾವಣೆ ಮಾಡಲಾಗಿದೆ. ಬಿ.ಆರ್.ಅಂಬೇಡ್ಕರ್ ರಸ್ತೆ, ಕಬ್ಬನ್ ರಸ್ತೆ, ಪ್ಯಾಲೆಸ್ ರಸ್ತೆ. ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ ಬಳಸದಂತೆ ಸೂಚನೆ ನೀಡಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂಎನ್ ಅನುಚೇತ್ ಟ್ವಿಟ್ಟರ್ ಮೂಲಕ ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.
‘ಸಂಚಾರ ಸಲಹೆ’ pic.twitter.com/tZ2yN611hH
— MN Anucheth, IPS (@Jointcptraffic) July 16, 2023
ಜುಲೈ 17 ಮತ್ತು 18ರಂದು ಎರಡು ದಿನಗಳ ಕಾಳ ಲೋಕಸಭೆಯ ವಿರೋಧ ಪಕ್ಷಗಳ ಹಲವು ಗಣ್ಯರು ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅತೀ ಗಣ್ಯ ವ್ಯಕ್ತಿಗಳ ಸಂಚಾರ ಇರುವ ಕಾರಣ ಈ ರಸ್ತೆ ಬಳಕೆದಾರರು ಬೇರೆ ಮಾರ್ಗದಲ್ಲಿ ಸಂಚರಿಸಬೇಕೆಂದು ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಇನ್ನು ವಿವಿಐಪಿ ಸಂಚಾರದಿಂದಾಗಿ ಬಿ.ಆರ್.ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ ಹಾಗೂ ರೇಸ್ ಕೋರ್ಸ್ ರಸ್ತೆಯಲ್ಲೂ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೇಗಾದ್ರೂ ಮಾಡಿ ಮುಂದಿನ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಕಟ್ಟಿಹಾಕಲೇಬೇಕೆಂದು ದೇಶದ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ.ಇದಕ್ಕಾಗಿ ಇಂದು (ಜುಲೈ 17) ಬೆಂಗಳೂರಿನಲ್ಲಿ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿವೆ . ಇನ್ನು ಈ ಸಭೆಯಲ್ಲಿ ಒಟ್ಟು 24 ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.