ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿಗೆ (Panchamasali 2A Reservation) ಆಗ್ರಹಿಸಿ ಮತ್ತೆ ಹೋರಾಟದ ಲಕ್ಷಣಗಳು ಕಾಣತೊಡಗಿವೆ. ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಒಂದೂವರೆ ವರ್ಷದಿಂದ ಮನವಿ ಮುಂದಿಟ್ಟು, ಹೋರಾಟ ನಡೆಸಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ ವರ್ಷ ಸೆಪ್ಟೆಂಬರ್ 15ರೊಳಗೆ ಮೀಸಲಾತಿ ಕೊಡುವ ಭರವಸೆ ನೀಡಿದ್ದರು. ಅದನ್ನು ನಂಬಿ ಸತ್ಯಾಗ್ರಹವನ್ನ ನಾವು ತಾತ್ಕಾಲಿಕವಾಗಿ ಕೈಬಿಟ್ಟಿದ್ದೆವು. ಆದರೆ ಅದು ಕೈಗೂಡಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ( Basavaraj Bommai) 3 ತಿಂಗಳು ಸಮಯ ಕೋರಿದ್ದರು. ಆದರೆ ದುರ್ದೈವ ಬಜೆಟ್ ವೇಳೆಯೂ ಮೀಸಲಾತಿ ಸಿಗಲಿಲ್ಲ. ಏಪ್ರಿಲ್ 14ಕ್ಕೆ ಮತ್ತೊಮ್ಮೆ ಸಿಎಂಗೆ ಅಂತಿಮ ಗಡುವು ಕೊಟ್ಟಿದ್ದೆವು. ಈಗ ಅಂತಿಮ ಗಡುವು ಮುಗಿದಿರುವ ಹಿನ್ನೆಲೆ ಹೋರಾಟ ಮುಂದುವರಿಸುವೆವು. ನಮ್ಮ ಧರಣಿ ವೇಳೆಗೆ ಸರ್ಕಾರ ಸ್ಪಂದಿಸಬಹುದು ಅಂದುಕೊಂಡಿದ್ದೇವೆ. ಸ್ಪಂದಿಸದೆ ಹೋದರೆ… ತಾಲೂಕು ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಿದ್ದೇವೆ. ಏಪ್ರಿಲ್ 21ರಂದು ಕೂಡಲಸಂಗಮದಿಂದ ಧರಣಿ ಪ್ರಾರಂಭಿಸುತ್ತೇವೆ. ಅಲ್ಲಿಗೂ ಬಗ್ಗದಿದ್ದರೆ ಆಯಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಧರಣಿ ನಡೆಸುವೆವು. ಮೇ 21ರಿಂದ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಧರಣಿ ಮಾಡ್ತೇವೆ. ಇದು ಐದು ಹಂತದ ನಮ್ಮ ಹೋರಾಟವಾಗಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ (Kudalasamgama Mruthyunjaya Swamiji )ಅವರು ಬೆಂಗಳೂರಿನಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Published On - 2:17 pm, Mon, 18 April 22