
ಬೆಂಗಳೂರು, ಜನವರಿ 28: ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಬೀಳದಂತಾಗಿದ್ದು, ಜೈಲಾಧಿಕಾರಿಗಳು ಎರಡು ತಿಂಗಳಿಂದ ನಿರಂತರ ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಕೈದಿಗಳು ಬಚ್ಚಿಟ್ಟುಕೊಂಡಿದ್ದ ಹಲವು ಮೊಬೈಲ್ಗಳು, ಇಯರ್ ಫೋನ್‌ಗಳು ಸಿಕ್ಕಿದ್ದು, ಈ ನಿಷೇಧಿತ ವಸ್ತುಗಳನ್ನು ಇಟ್ಟುಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಜೈಲಿನಲ್ಲಿ ಟವರ್–1ರ 6ನೇ ಬ್ಯಾರಕ್‌ನ 4ನೇ ಕೊಠಡಿಯಲ್ಲಿ ನಡೆಸಿದ ರೇಡ್ ವೇಳೆ ಕೈದಿಗಳು ಅಡಗಿಸಿಕೊಂಡಿದ್ದ 8 ಮೊಬೈಲ್ ಫೋನ್‌ಗಳು, 1 ಸಿಮ್ ಕಾರ್ಡ್, 2 ಚಾರ್ಜರ್‌ಗಳು ಹಾಗೂ 3 ಇಯರ್‌ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಜೈಲಾಧಿಕಾರಿಗಳು ಸೀಜ್ ಮಾಡಲಾಗಿದೆ. ಇನ್ನೊಂದೆಡೆ, ಮಹಿಳೆಯೊಬ್ಬರು ಕೈದಿಗೆ ಅಕ್ರಮವಾಗಿ ಹಣ ನೀಡಲು ಯತ್ನಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಜನವರಿ 23ರಂದು ಕೈದಿ ಸೋಮಶೇಖರ್‌ನನ್ನು ಭೇಟಿಯಾಗಲು ಬಂದ ಅನುಷಾ ಎಂಬ ಮಹಿಳೆ ಮಾತುಕತೆ ವೇಳೆ ಗಾಜಿನ ಕೆಳಭಾಗದ ರಂಧ್ರದ ಮೂಲಕ ಹಣ ನೀಡಲು ಮುಂದಾದಾಗ 22,000 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ
ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಡ್ಯಾನ್ಸ್ ಜೊತೆಗೆ ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಎಲ್ಲೆಡೆ ಹರಿದಾಡಿದ್ದವು.ಈ ಹಿನ್ನೆಲೆ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.ನಂತರ ಡಿಜಿಪಿಯಾಗಿ ಬಂದಿದ್ದ ಅಲೋಕ್ ಕುಮಾರ್, ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.ಇದರ ಬೆನ್ನಲ್ಲೇ ಜೈಲಾಧಿಕಾರಿಗಳು ಬ್ಯಾರಕ್‌ಗಳ ಮೇಲೆ ದಾಳಿ ತೀವ್ರಗೊಳಿಸಿದ್ದು, ನಿಷೇಧಿತ ವಸ್ತುಗಳ ಬೇಟೆ ಮುಂದುವರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.