ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್!
ಕರ್ನಾಟಕ ಸಾರಿಗೆ ನೌಕರರ ಪ್ರತಿಭಟನೆ: ಸಾರಿಗೆ ನೌಕರರು ವೇತನ ಹಿಂಬಾಕಿ ಹಾಗೂ ಪರಿಷ್ಕರಣೆಗೆ ಆಗ್ರಹಿಸಿ 'ಬೆಂಗಳೂರು ಚಲೋ'ಗೆ ಕರೆ ನೀಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ನಾಳೆ ಪ್ರತಿಭಟನೆ ನಡೆಯಲಿದ್ದು, ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೆ ಸಿದ್ಧತೆಯೂ ನಡದಿದೆ ಎನ್ನಲಾಗಿದೆ. ಮತ್ತೊಂದೆಡೆ ಕೆಎಸ್‌ಆರ್‌ಟಿಸಿ 'ನೋ ವರ್ಕ್ ನೋ ಪೇ' ಆದೇಶದ ಮೂಲಕ ಪ್ರತಿಭಟನೆಗೆ ಬ್ರೇಕ್ ಹಾಕಲು ಯತ್ನಿಸಿದೆ. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೂ ಖಡಕ್ ಸೂಚನೆ ನೀಡಲಾಗಿದೆ.

ಬೆಂಗಳೂರು, ಜನವರಿ 28: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಡಿದೆದ್ದಿದ್ದು, ನಾಳೆ ‘ಬೆಂಗಳೂರು ಚಲೋ’ಗೆ ಕರೆ ನೀಡಲಾಗಿದೆ. ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಕಳೆದ ವರ್ಷ ಆಗಸ್ಟ್ 5ರಂದು ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆದರೆ ಈ ವರ್ಷದ ಆರಂಭದಲ್ಲೇ ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ. ನಾಲ್ಕೂ ನಿಗಮಗಳ ವತಿಯಿಂದ ಪ್ರತಿಭಟನೆ ನಡೆಯಲಿದೆ.
ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೆ ಸಿದ್ಧತೆ
ನಾಳೆ ಸಂಜೆ 4 ಗಂಟೆಯೊಳಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಿಲ್ಲ ಅಂದರೆ, ಸುದ್ದಿಗೋಷ್ಟಿ ಕರೆದು ಮುಷ್ಕರಕ್ಕೆ ಕರೆ ನೀಡಲು ಪ್ಲ್ಯಾನ್ ಮಾಡಲಾಗಿದೆ. ಇದಕ್ಕೆ ಬೇಕಿರುವ ಅಗತ್ಯ ಸಿದ್ಧತೆಗಳನ್ನೂ ಮುಖಂಡರು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ನೌಕರರಿಗೆ ಕೆಎಸ್‌ಆರ್‌ಟಿಸಿ ಶಾಕ್ ಕೊಟ್ಟಿದ್ದು, ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಗುರುವಾರ ಡ್ಯೂಟಿಗೆ ಬಂದಿಲ್ಲ ಅಂದರೆ ‘ನೋ ವರ್ಕ್ ನೋ ಪೇ’ ಎಂದು ಎಂಡಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಜ.29ರಂದು ಬೆಂಗಳೂರು ಚಲೋ ಕೈಗೊಂಡ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ KSRTC
01-01-2020ರಿಂದ 28-02-2023ರ ವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಾಗೂ 01.01.2024 ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯು ಜನವರಿ 29ರ ಗುರುವಾರ ಬೆಂಗಳೂರು ಚಲೋಗೆ ಕರೆ ನೀಡಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಇಲಾಖೆ ಮುಂಜಾಗೃತೆ ಕೈಗೊಂಡಿದೆ. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು ಎಂದು ಅಧಿಕಾರಿಗಳಿಗೆ ಎಂಡಿ ಖಡಕ್ ಸೂಚನೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Wed, 28 January 26